ಶಿವಮೊಗ್ಗ: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಶಿವಮೊಗ್ಗದಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಈಗಾಗಲೇ ಕೆಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಜಿ.ಟಿ.ದೇವೇಗೌಡ ಕಾಂಗ್ರೆಸ್ ಪಕ್ಷ ಸೇರುತ್ತಾರೆ. ಅವರು ನಮಗೆ ಬಹಳ ಹಳಬರು, ಸ್ವಲ್ಪ ದಿನ ದೂರವಾಗಿದ್ದರು. ಈಗ ಮತ್ತೆ ಪಕ್ಷಕ್ಕೆ ಹತ್ತಿರವಾಗಲಿದ್ದಾರೆ. ನಮ್ಮ ಹತ್ತಿರವೇ ಇರುವ ಹಾಗೆ ನೋಡಿಕೊಳ್ಳುತ್ತಿದ್ದೇವೆ. ಶಾಸಕ ಚನ್ನಬಸಪ್ಪ ಕೂಡ ಈಗಾಗಲೇ ನಮ್ಮ ಹತ್ತಿರದಲ್ಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಮಾಜಿ ಶಾಸಕರಾದ ಡಿಸಿ ಗೌರಿಶಂಕರ್ ಹಾಗೂ ಮಂಜುನಾಥ್ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ನಾಳೆ ಅಧಿಕೃತವಾಗಿ ಪಕ್ಷ ಸೇರಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ ಡಿ ಕುಮಾರಸ್ವಾಮಿ, ಇದು ಹಳೆಯ ವಿಚಾರ, ಇದರಿಂದ ನನಗನೂ ಶಾಕ್ ಆಗಲ್ಲ. ಗೌರಿಶಂಕರ್, ಮಂಜುನಾಥ್ ಕರೆದು ಎರಡು ಬಾರಿ ಮಾತನಾಡಿದ್ದೇನೆ ಅವರಿಗೆ ಅನುಕೂಲ ಆಗುವ ಕಡೆ ಹೋಗಿದ್ದಾರೆ. ನಮಗೆ ಯಾವುದೇ ತೊಂದರೆ ಆಗಲ್ಲ, ಕಾರ್ಯಕರ್ತರಿದ್ದಾರೆ ಎಂದರು.