ಕೆ.ಆರ್.ಪೇಟೆ; ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಹೆಚ್.ಟಿ.ಮಂಜು ಬೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್‌ಗೆ ವಿರುದ್ದ ದೂರುಗಳ ಸುರಿಮಳೆಗೈದರು.
ಕಳೆದ ಹಲವು ದಿನಗಳಿಂದ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್ ವಿರುದ್ದ ಆಸ್ಪತ್ರೆಯ ವೈದ್ಯರೂ ಸೇರಿದಂತೆ ಸಿಬ್ಬಂದಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಾಕಷ್ಟು ಅಸಮಾಧಾನ ಹೊಗೆಯಾಡುತ್ತಿದ್ದು ಅವರ ನಡುವಳಿಕೆಗಳು ಎಲ್ಲರಿಗೂ ಬೇಸರ ತರಿಸಿವೆ. ಅವರನ್ನೇ ಮುಂದುವರಿಸುವುದಾದರೆ ನಮ್ಮನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಕಳುಹಿಸಿ ಎಂದು ವೈದ್ಯರುಗಳು ಶಾಸಕರಿಗೆ ಮನವಿ ಸಲ್ಲಿಸಿದರು. ಅಲ್ಲದೇ ಆಸ್ಪತ್ರೆ ಸಿಬ್ಬಂದಿಗಳು ದುರಾಡಳಿತದ ಬಗ್ಗೆ ಸಾಕಷ್ಟು ದೂರುಗಳನ್ನು ವಿವರಿಸಿದರು. ಈ ಆಸ್ಪತ್ರೆಯಲ್ಲಿ ಮುಖ್ಯ ಆಡಳಿತ ವೈದ್ಯಾಧಿಕಾರಿ ಹುದ್ದೆ ಇರುವುದಿಲ್ಲ ಹಿರಿಯ ತಜ್ಞರಿಗೆ ಹಾಗೂ ಅರ್ಹತೆಯ ಆಧಾರದ ಮೇಲೆ ಆಡಳಿತ ನಡೆಸಲು ಸರ್ಕಾರದ ನಡುವಳಿಕೆ ಇರುವುದರಿಂದ ಅದನ್ನು ಪಾಲಿಸಬೇಕು. ಹಿರಿಯ ತಜ್ಞವೈದ್ಯರಿಗೆ ಅರ್ಹತೆ ಆಧಾರದ ಮೇಲೆ ಆಡಳಿತ ವೈದ್ಯಾಧಿಕಾರಿ ಹುದ್ದ ನೀಡಲು ಈಗಿರುವ ಡಾ.ಶಿವಕುಮಾರ್ ಎಲ್ಲರಿಗಿಂತ ಕಿರಿಯ ತಜ್ಞವೈದ್ಯರಾಗಿದ್ದು ಅವರನ್ನು ಈ ಕೂಡಲೇ ಬದಲಿಸಬೇಕು ಎಂದು ಮನವಿ ಸಲ್ಲಿಸಿದರು.
ರೋಗಿಗಳಿಗೆ ಔಷಧಿಗಳನ್ನು ಮತ್ತು ಮಾತ್ರೆಗಳನ್ನು ಹೊರಗಡೆಗೆ ಬರೆದುಕೊಡುತ್ತಾರೆಂಬ ಆರೋಪಗಳಿದ್ದು ಫಾರ್ಮಸಿ ಅಧಿಕಾರಿಗಳು ರೋಗಿಗಳಿಗೆ ಅವಶ್ಯಕವಿರುವ ಹಾಗೂ ಜೀವರಕ್ಷಕ ಔಷಧಿಗಳನ್ನು ಖರೀದಿ ಮಾಢಿ ವಿತರಿಸಬೇಕು ಹಾಗೂ ಅವಧಿ ಮೀರಿದ ಔಷಧಿಗಳನ್ನು ಸಮರ್ಪಕವಾಗಿ ವಿಲೇ ಮಾಡಬೇಕು ಎಂದು ಸೂಚಿಸಿದರು. ಶವಾಗಾರದ ಸುತ್ತಲೂ ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಚತೆಯನ್ನು ಸರಿಯಾಗಿ ನಿರ್ವಹಿಸಿಲ್ಲ. ಪ್ರತಿದಿನ ನೂರಾರು ಸಂಖ್ಯೆಯ ರೋಗಿಗಳು ಬರುವ ಆಸ್ಪತ್ರೆಯನ್ನು ನಿಮ್ಮ ಮನೆಯಂತೆ ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕಾದುದು ನಿಮ್ಮ ಕರ್ತವ್ಯ ಎಂದರು. ಡಯಾಲಿಸಿಸ್ ವಿಬಾಗದಲ್ಲಿ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಾ ಔಷಧಿಗಳನ್ನು ಆಸ್ಪತ್ರೆಯಿಂದಲೇ ನೀಡಬೇಕು. ರೋಗಿಗಳಿಂದ ಯಾವುದೇ ಔಷಧಿಯನ್ನೂ ಸಹ ತರಿಸಬಾರದು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ಮಹಿಳಾ ಮತ್ತು ಪುರುಷರ ವಾರ್ಡುಗಳಿಗೆ ಭೇಟಿ ನೀಡಿದ ಅವರು ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಊಟ, ನೀರು ಸಮರ್ಪಕವಾಗಿ ಸಿಗುತ್ತಿರುವ ಬಗ್ಗೆ ರೋಗಿಗಳನ್ನು ಪ್ರಸ್ನಿಸಿದರು. ಆಯುಷ್ ಇಲಾಖೆಯಿಂದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.
ಶಾಸಕರ ಭೇಟಿ ಸಮಯದಲ್ಲಿ ಡಿಹೆಚ್.ಓಡಾ.ಧನಂಜಯ, ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ.ಅಶ್ವಥ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಅಶೋಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್ ಸೇರಿದಂತೆ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.