ಯಳಂದೂರು: ಯಳಂದೂರು ಪಟ್ಟಣ ಪಂಚಾಯಿತಿ ಚಿಕ್ಕದಾಗಿದ್ದು ಇಲ್ಲಿನ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಮಾಸ್ಟರ್ ಪ್ಲಾನ್‌ನ್ನು ರಚಿಸಿಕೊಟ್ಟಲ್ಲಿ ನಾನು ಸರ್ಕಾರದಿಂದ ವಿಶೇಷ ಅನುದಾನವನ್ನು ತಂದು ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಅವರು ಪಟ್ಟಣ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನೂತನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ: ಪಟ್ಟಣದಲ್ಲಿ ನೂತನವಾಗಿ ಕೆಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಇಂದಿರಾ ಕ್ಯಾಂಟೀನ್ ಬಳಿ ಇರುವ ೧.೧೫ ಎಕರೆ ಜಾಗದಲ್ಲಿ ೧.೦೫ ಎಕರೆ ಜಾಗದಲ್ಲಿ ಬಸ್ ನಿಲ್ದಾಣ ಮಾಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆದಷ್ಟು ಬೇಗ ಈ ಕಾಮಗಾರಿ ಆರಂಭಿಸಲು ಕ್ರಮ ವಹಿಸಲಾಗುವುದು. ಅಲ್ಲದೆ ಸಮಗ್ರ ಕುಡಿಯುವ ನೀರಿಗೆ ೬ ಕೋಟಿ ರೂ. ಹಣ ಬಿಡುಗಡೆಯಾಗಿತ್ತು.
ಈಗಾಗಲೇ ಇದಕ್ಕೆ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಮೂರು ಬಾರಿಯೂ ಒಬ್ಬರೇ ಟೆಂಡರ್ ಹಾಕಿರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಇದನ್ನು ಕಳುಹಿಸಿ ಇವರಿಗೆ ಟೆಂಡರ್ ನೀಡಲು ಕ್ರಮ ವಹಿಸಲಾಗುವುದು ಆಗ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಅಲ್ಲದೆ ಮುಳ್ಳೂರು ಗ್ರಾಮದಲ್ಲಿರುವ ಜಾಕ್‌ವೆಲ್‌ನಿಂದ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಸರಬರಾಜಾಗುತ್ತಿದ್ದು ಮದ್ಯ ಇರುವ ಗ್ರಾಮಗಳಿಗೂ ನೀರು ನೀಡಲಾಗುತ್ತಿದೆ.
ಈಗ ಜೆಜೆಎಂ ಯೋಜನೆ ಜಾರಿಯಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಇದನ್ನು ಕಡಿತಗೊಳಿಸಲು ಕ್ರಮ ವಹಿಸಲಾಗುವುದು. ಎಸ್‌ಎಫ್‌ಸಿ ಹಾಗೂ ೧೫ ನೇ ಹಣಕಾಸು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಪಟ್ಟಣದ ಅಭಿವೃದ್ಧಿಯ ಹೊಸ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಪಂಚಾಯಿತಿಯಲ್ಲಿ ೪೦ ಮಂಜೂರು ಹುದ್ದೆಗಳಿದ್ದು ಇಲ್ಲಿ ಸಿಬ್ಬಂಧಿ ಕೊರತೆ ಇದೆ. ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಹೈಮಾಸ್ಟ್ ವಿದ್ಯುತ್ ದೀಪಗಳ ದುರಸ್ತಿ, ಹಳೇ ಪಪಂ ಕಚೇರಿಯ ನವೀಕರಣ, ಸಂತೆಮಾಳದಲ್ಲಿರುವ ಅಂಗಡಿ ಮಳಿಗೆಗಳ ದುರಸ್ತಿಗೆ ಮನವಿ ಮಾಡಿದ್ದು ಇದನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಸತ್ತವರ ಹೆಸರಲ್ಲಿ ಇ-ಸ್ವತ್ತು ! ಶಾಸಕ ಗರಂ: ಪಟ್ಟಣ ಪಂಚಾಯಿತಿಯ ೨ ನೇ ವಾರ್ಡಿನ ಸದಸ್ಯ ವೈ.ಜಿ. ರಂಗನಾಥ ಈ ವಾರ್ಡಿನ ಕಮ್ಮನಕೇರಿ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನಾಯಕ ಎಂಬುವವರಿಗೆ ಇ-ಸ್ವತ್ತು ನೀಡಲಾಗಿದೆ. ಆದರೆ ಇವರು ಸತ್ತು ೧೦ ವರ್ಷಗಳ ಮೇಲಾಗಿದೆ. ಅಲ್ಲದೆ ನಾಡ ಹಂಚಿನ ಆರ್‌ಸಿಸಿ ಕಟ್ಟಡವೆಂದು ಪರಿಗಣಿಸಿ ಇ-ಸ್ವತ್ತು ನೀಡಲಾಗಿದ್ದು ಇದಕ್ಕೆ ಕಾರಣವಾಗಿರುವ ನೌಕರರ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕರು ಕೆಲ ಕಾಲ ನೌಕರರು, ಮುಖ್ಯಾಧಿಕಾರಿಗಳ ವಿರುದ್ಧ ಗರಂ ಆದ ಪ್ರಸಂಗವೂ ಜರುಗಿತು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ವಹಿಸಿ ಎಂದು ಮುಖ್ಯಾಧಿಕಾರಿಗೆ ಸೂಚನೆ ನೀಡಿದ ಪ್ರಸಂಗವೂ ನಡೆಯಿತು.
ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹದೇವನಾಯಕ, ಸವಿತಾ ಬಸವರಾಜು, ಮಂಜು, ಪ್ರಭಾವತಿ, ಬಿ. ರವಿ, ಸುಶೀಲಾ ಪ್ರಕಾಶ್ ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಜೆಇ ನಾಗೇಂದ್ರ, ಜಯಲಕ್ಷ್ಮಿ, ಲಕ್ಷ್ಮಿ, ರೇಖಾ, ಬಸವಣ್ಣ, ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಅನೇಕರು ಇದ್ದರು.