ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿರುವ ಶಿಕ್ಷೆ ಮತ್ತು ದಂಡದ ತೀರ್ಪನ್ನು ರದ್ದು ಪಡಿಸುವಂತೆ ಕಾರವಾರದ ಶಾಸಕ ಸತೀಶ್ ಸೈಲ್ , ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್, ಕೆವಿಎನ್ ಗೋವಿಂದರಾಜ್ ಮತ್ತು ಚೇತನ್ ಶಾ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಗುರುವಾರ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
ಮೆಸರ್ಸ್ ಮಲ್ಲಿಕಾರ್ಜುನ್ ಶಿಪ್ಪಿಂಗ್ ಪ್ರೈ ಲಿಮಿಟೆಡ್ ಮತ್ತು ಅದರ ಮಾಲಕ ಸತೀಶ್ ಸೈಲ್ ಪ್ರತ್ಯೇಕವಾಗಿ ಸಲ್ಲಿಸಿರುವ 6 ಅರ್ಜಿಗಳು, ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್, ಕೆವಿಎನ್ ಗೋವಿಂದರಾಜ್ ಮತ್ತು ಚೇತನ್ ಶಾ ಹಾಗೂ ಆಶಾಪುರ ಮೈನೆcಮ್ ಲಿಮಿಟೆಡ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅಂತಿಮವಾಗಿ ಪೀಠವು ಇದೇ ಪ್ರಕರಣಕ್ಕೆ ಸಂಬಂಧಿಸಿದ ಇತರ 2ಪ್ರಕರಣಗಳನ್ನು ನವೆಂಬರ್ 13ಕ್ಕೆ ವಿಚಾರಣೆಗೆ ನಿಗದಿಪಡಿಸಲಾಗಿದೆ. ಹೀಗಾಗಿ, ಅಂದು ಎಲ್ಲ ಪ್ರಕರಣದಲ್ಲಿ ಆದೇಶ ಮಾಡಲಾಗುವುದು ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.