ನವದೆಹಲಿ : ಕಲಬುರಗಿ ಜಿಲ್ಲೆಯ ಚಿಂಚೋಳಿಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಯಲ್ಲಿ ಮುಂದಿನ ಏಳು ದಿನದ ಒಳಗಾಗಿ ಕಬ್ಬು ಅರೆಯುವ ಪ್ರಕ್ರಿಯೆಯನ್ನು ಆರಂಭಿಸಲು ಸೂಕ್ತ ಆದೇಶ ನೀಡುವಂತೆ ರಾಜ್ಯಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿರುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಎಥೆನಾಲ್ ಉತ್ಪಾದನೆ ವಿಚಾರದಲ್ಲಿ ನಿಯಮ ಉಲ್ಲಂಘನೆ ಆರೋಪದಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿತ್ತು. ನೋಟಿಸ್ ಪ್ರಶ್ನಿಸಿ ಯತ್ನಾಳ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಕಾರ್ಖಾನೆ ತೆರೆಯಲು ಅನುಮತಿ ನೀಡಿತ್ತು.
ಸಕ್ಕರೆ ಕಾರ್ಖಾನೆ ತೆರೆಯಲು ಹೈಕೋರ್ಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲ್ಮನವಿ ಸಲ್ಲಿಸಿರುವ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಕಾರ್ಖಾನೆ ಮಾಲೀಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು.
ಈ ಕುರಿತಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡು, ಮುಂದಿನ 7 ದಿನಗಳಲ್ಲಿ ನಮ್ಮ ಸಿದ್ದಸಿರಿ ಎಥೆನಾಲ್ ಮತ್ತು ಪವರ್‌ನಲ್ಲಿ ಕಬ್ಬು ಅರೆಯುವುದನ್ನು ಪುನರಾರಂಭಿಸಲು ಸಮ್ಮತಿ/ಅನುಮತಿ ನೀಡುವಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಬೆಳಗಾವಿಯ ನಂದಗಡ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಪೂಜೆ ಸಲ್ಲಿಸುವ ವೇಳೆ ಈ ಸುದ್ದಿ ತಿಳಿಯಿತು.
ಇದು ಸಾಮಾನ್ಯ ರೈತರಿಗೆ ಮತ್ತು ನಿರ್ದಿಷ್ಟವಾಗಿ ಕಬ್ಬು ಬೆಳೆಗಾರರಿಗೆ ದೊಡ್ಡ ಗೆಲುವು ಮತ್ತು ನಮ್ಮ ಕಾರ್ಖಾನೆಯನ್ನು ಸ್ಥಗಿತಗೊಳಿಸಲು ರಾಜಕೀಯ ಮಾಡಿದವರಿಗೆ ವಿನಾಶಕಾರಿ ಸೋಲು. ಈ ಐತಿಹಾಸಿಕ ನಿರ್ಧಾರವು ರೈತ ಸಮುದಾಯಕ್ಕೆ, ಕಾರ್ಮಿಕರಿಗೆ ಉದ್ಯೋಗ, ಮತ್ತು ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾದ ಚಿಂಚೋಳಿಯ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಸತ್ಯಮೇವ ಜಯತೇ ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಬರೆದುಕೊಂಡಿದ್ದಾರೆ.