ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ಬೋಧನಾ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಸಿಟಿ ಸ್ಕ್ಯಾನ್ ಸೇವೆಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಚಾಲನೆ ನೀಡಿದರು.
ಸಿಟಿ ಸ್ಕ್ಯಾನ್ ಕೊಠಡಿ, ಇತರೆ ವೈದ್ಯಕೀಯ ತಾಂತ್ರಿಕ ಉಪಕರಣಗಳನ್ನು ಒಳಗೊಂಡ ಕೊಠಡಿಗಳನ್ನು ಶಾಸಕರು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಸಿಟಿ ಸ್ಕ್ಯಾನ್ ಸೇವೆ ಜಿಲ್ಲೆಯ ಜನರಿಗೆ ಅಗತ್ಯವಾಗಿತ್ತು. ಇದರ ಸೇವೆಗಾಗಿ ಸಾಕಷ್ಟು ಪ್ರಕ್ರಿಯೆಗಳು ನಡೆದು ಇಂದು ಚಾಲನೆ ದೊರೆತಿದೆ. ಎಂ.ಆರ್.ಐ ಸ್ಕ್ಯಾನ್ ಸೇವೆಯು ಜನರಿಗೆ ಜರೂರಾಗಿ ಅವಶ್ಯಕತೆಯಿದೆ. ಇದಕ್ಕೆ ಮಂಜೂರಾತಿ ದೊರೆತಿದ್ದು ಇನ್ನು ಮೂರು ತಿಂಗಳೊಳಗೆ ಎಂ.ಆರ್.ಐ ಸ್ಕ್ಯಾನ್ ಸೇವೆ ಸಹ ಲಭಿಸಲಿದೆ ಎಂದರು.
ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಹೋಗುವುದು ತಪ್ಪಬೇಕು. ಇಲ್ಲಿಯೇ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ದೊರೆಯಬೇಕು. ಮೂತ್ರಪಿಂಡ ವೈಪಲ್ಯ ಚಿಕಿತ್ಸೆಗೆ ಹೆಚ್ಚು ಜನರು ಬರುತ್ತಿದ್ದಾರೆ. ಇವರಿಗೆ ಸರಿಯಾದ ಸಮಯಕ್ಕೆ ಅಗತ್ಯವಿರುವ ಚಿಕಿತ್ಸೆ ಸಿಗಬೇಕು. ವೈದ್ಯರ ಬಗ್ಗೆ ಜನರಿಗೆ ಹೆಚ್ಚಿನ ನಂಬಿಕೆ ವಿಶ್ವಾಸ ಇದೆ. ನಿರೀಕ್ಷೆಗೆ ತಕ್ಕಂತೆ ವೈದ್ಯರು ಸೇವೆ ಸಲ್ಲಿಸುವ ಮೂಲಕ ಸ್ಪಂದಿಸಬೇಕು ಎಂದು ತಿಳಿಸಿದರು.
ಇದೇ ಸೆ. 27ರಂದು ಜಿಲ್ಲೆಗೆ ಮುಖ್ಯಮಂತ್ರಿಗಳು ಭೇಟಿ ನೀಡುವ ಸಂದರ್ಭದಲ್ಲಿ ಆಸ್ಪತ್ರೆಗೆ ಬೇಕಿರುವ ಹೆಚ್ಚಿನ ಸೌಲಭ್ಯಗಳ ಬಗ್ಗೆ ಅವರ ಗಮನಕ್ಕೆ ತಂದು ಒದಗಿಸಲಾಗುವುದು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರಸಭಾ ಸದಸ್ಯರಾದ ರಾಜಪ್ಪ, ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್ ಡಾ. ಹೆಚ್.ಜಿ. ಮಂಜುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ ಡಾ. ಮಹೇಶ್, ಡಾ. ಮಾರುತಿ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.