Friday, April 11, 2025
Google search engine

Homeರಾಜಕೀಯಸಿಎಂ ಬೆನ್ನಿಗೆ ನಿಂತ ಶಾಸಕರು: ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯಗೆ ಬೆಂಬಲ

ಸಿಎಂ ಬೆನ್ನಿಗೆ ನಿಂತ ಶಾಸಕರು: ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯಗೆ ಬೆಂಬಲ

ಬೆಂಗಳೂರು: ಮುಡಾ ಕೇಸ್​ನಲ್ಲಿ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ಕಾನೂನು ಸಮರದ ಜೊತೆಗೆ ಶಾಸಕರ ಜೊತೆಗೂ ನಿರಂತರ ಚರ್ಚೆ ಮಾಡುತ್ತಿದ್ದಾರೆ. ಸಿಎಂ, ಡಿಸಿಎಂ ಇಂದು ಶಾಸಕರ ಜೊತೆ ಸಭೆ ನಡೆಸಿದರು.

ಸಿಎಂ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ಸಿಎಂಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ. ನೀವು ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ಕಾನೂನು ಹೋರಾಟ ನಡೆಸಿ ಅಂತ ಶಾಸಕರು ಸಲಹೆ ಕೊಟ್ಟಿದ್ದಾರೆ. ಅದಕ್ಕೆ ಸಿಎಂ ಸಹ ಧನ್ಯವಾದ ಹೇಳಿದರು. ನನ್ನ ಪರವಾಗಿ ಹೋರಾಡುತ್ತಿದ್ದೀರಿ, ನಿಮಗೆ ಧನ್ಯವಾದ ಅಂತ ಹೇಳಿದ್ದಾರೆ. ನಾಳೆ (ಆ.23) ಹೈಕಮಾಂಡ್ ಭೇಟಿಗಾಗಿ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದು, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಸರ್ವಾನುಮತದಿಂದ ಶಾಸಕರು ಸಿಎಂಗೆ ಬೆಂಬಲ ವ್ಯಕ್ತ

ಶಾಸಕಾಂಗ ಪಕ್ಷದ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಸಭೆಯಲ್ಲಿ ಸರ್ವಾನುಮತದಿಂದ ಶಾಸಕರು ಸಿಎಂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಸಕ ಆರ್.ವಿ.ದೇಶಪಾಂಡೆ ಸೂಚಿಸಿ ತನ್ವೀರ್ ಸೇಠ್​ ಅನುಮೋದಿಸಿದ್ದಾರೆ. ರಾಜ್ಯಪಾಲರು ಸರಿಯಾದ ತನಿಖೆ ನಡೆಸದೆ ಪ್ರಾಸಿಕ್ಯೂಷನ್​ಗೆ ಕೊಟ್ಟಿದ್ದಾರೆ. ರಾಜ್ಯಪಾಲರ ನಡೆ ಸರ್ವಾನುಮತದಿಂದ ಖಂಡಿಸಿದ್ದೇವೆ ಎಂದು ಹೇಳಿದ್ದಾರೆ.

ಸರ್ಕಾರವನ್ನು ಅಭದ್ರಗೊಳಿಸಲು ತೊಂದರೆ ಕೊಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರಕ್ಕೆ ಯಾರು ಕೂಡ ಏನೂ ಮಾಡಲು ಸಾಧ್ಯವಿಲ್ಲ. ನಾವೆಲ್ಲ ಗಟ್ಟಿಯಾಗಿ ಸಿಎಂ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದ್ದೇವೆ. ಹೈಕಮಾಂಡ್​ ನಾಯಕರ ಭೇಟಿಗೆ ಶುಕ್ರವಾರ ದೆಹಲಿಗೆ ತೆರಳುತ್ತಿದ್ದೇವೆ. ಹೈಕಮಾಂಡ್ ನಾಯಕರು ನಮ್ಮನ್ನು ಕರೆದಿಲ್ಲ, ನಾವೇ ಹೋಗುತ್ತಿದ್ದೇವೆ. ಎಲ್ಲಾ ವಿಚಾರಗಳನ್ನು ನಾವು ಹೈಕಮಾಂಡ್ ಮುಂದೆ ತಿಳಿಸುತ್ತೇವೆ. ರಾಜ್ಯ ಸರ್ಕಾರ ಮತ್ತು ಸಿಎಂ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ನಾವು ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ಮಾಡುತ್ತಿದ್ದೇವೆ. ಈಗಲೂ ರಾಜ್ಯಪಾಲರು ತಮ್ಮ ನಿರ್ಣಯವನ್ನು ವಾಪಸ್ ಪಡೆದರೆ ಸಂವಿಧಾನಕ್ಕೆ ಗೌರವ ಕೊಟ್ಟಂತೆ ಆಗುತ್ತೆ. ರಾಜ್ಯಪಾಲರಿಗೆ ಮುಜುಗರ ಬೇಡ ಅಂತಾ ಕಾನೂನಿನ ಚೌಕಟ್ಟಿನಲ್ಲೇ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ವಿನಯ್ ಕುಲಕರ್ಣಿ, ಆರ್.ವಿ.ದೇಶಪಾಂಡೆ, ಎನ್ಎ ಹ್ಯಾರಿಸ್, ಕೆಜೆ ಜಾರ್ಜ್, ಪ್ರದೀಪ ಈಶ್ವರ್, ಜಿಟಿ ಪಾಟೀಲ್, ಬಿ.ಆರ್.ಪಾಟೀಲ್​, ಪಿಎಂ ನರೇಂದ್ರ ಸ್ವಾಮಿ, ಜಮೀರ್ ಅಹಮದ್ ಖಾನ್ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular