Friday, January 23, 2026
Google search engine

Homeರಾಜಕೀಯಭ್ರಷ್ಟಾಚಾರ ಕಡಿವಾಣಕ್ಕೆ ಮನ್ರೇಗಾ ಯೋಜನೆ ಬದಲು : ಶಿವರಾಜ್ ಸಿಂಗ್ ಚೌಹಾಣ್

ಭ್ರಷ್ಟಾಚಾರ ಕಡಿವಾಣಕ್ಕೆ ಮನ್ರೇಗಾ ಯೋಜನೆ ಬದಲು : ಶಿವರಾಜ್ ಸಿಂಗ್ ಚೌಹಾಣ್

ಬೆಂಗಳೂರು: ಹಿಂದಿನ ವರ್ಷಗಳಲ್ಲಿ, ವಿಶೇಷವಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ವ್ಯವಸ್ಥಿತ ಅಕ್ರಮಗಳು ನಡೆದಿದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಯೋಜನೆಯನ್ನು ಬದಲಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಸರ್ಕಾರ ಪುನರ್‌ರಚಿಸಿರುವ ಗ್ರಾಮೀಣ ಉದ್ಯೋಗ ಯೋಜನೆ VB-G-RAM-G ಕುರಿತು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸಮರ್ಥನೆ ನೀಡಿದ್ದು, ಮನ್ರೇಗಾ ಯೋಜನೆಯಡಿ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು ಮತ್ತು ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದು ನಮ್ಮ ಸರ್ಕಾರ. ಆದರೆ ಇದನ್ನು ಮರೆಮಾಚುತ್ತಿರುವ ಕಾಂಗ್ರೆಸ್‌, ನರೇಗಾ ಯೋಜನೆಯ ರಕ್ಷಕನಂತೆ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

2006–07 ರಿಂದ 2013–14ರವರೆಗೆ ಯುಪಿಎ ಸರ್ಕಾರವು ನರೇಗಾ ಯೋಜನೆ ಮೂಲಕ ಕರ್ನಾಟಕದಲ್ಲಿ 58.46 ಕೋಟಿ ಮಾನವ ದಿನಗಳಷ್ಟು ಕೆಲಸ ಸೃಷ್ಟಿಸಿತ್ತು ಮತ್ತು 8,739.32 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ನಮ್ಮ ಸರ್ಕಾರವು 2014–15ರಿಂದ 2025–26ರಲ್ಲಿ ಈವರೆಗೆ ಒಟ್ಟು 127.52 ಕೋಟಿ ಮಾನವ ದಿನಗಳಷ್ಟು ಕೆಲಸ ಸೃಷ್ಟಿಸಿದ್ದು, 48,549.82 ಕೋಟಿ ರೂ.ಬಿಡುಗಡೆ ಮಾಡಿದೆ.

ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಪುರುಷರು ಸೀರೆಯುಟ್ಟು, ಮಹಿಳೆಯರಂತೆ ಬಿಂಬಿಸಿಕೊಂಡು ನರೇಗಾದ ಅಡಿ ಕೂಲಿ ಪಡೆದುಕೊಂಡಿದ್ದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇಂತಹ ನೂರಾರು ಅಕ್ರಮಗಳು ಸೋಷಿಯಲ್‌ ಆಡಿಟ್‌ ಮೂಲಕ ಪತ್ತೆಯಾಗಿದ್ದವು. ಅಕ್ರಮದ ಮೊತ್ತದಲ್ಲಿ ರೂ,.107.78 ಕೋಟಿ ವಸೂಲಿ ಮಾಡುವಂತೆ ಸೂಚಿಸಿದ್ದರೂ, ಒಂದು ರೂಪಾಯಿಯೂ ವಸೂಲಾಗಲಿಲ್ಲ.

ಇನ್ನೂ ಮಹಾಲೇಖಪಾಲರ ವರದಿಯಲ್ಲಿ 24.12 ಕೋಟಿ ರೂ.ವಸೂಲಿಗೆ ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ವಸೂಲಿ ಮಾಡಿದ್ದು 2.47 ಕೋಟಿ ರೂ. ಮಾತ್ರ. ಕಲಬುರಗಿ ಜಿಲ್ಲೆಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ದೂರು ಬಂದಿತ್ತು ಎಂದು ವಿವರಿಸಿದರು. ಇನ್ನೂ ನರೇಗಾದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಮನಮೋಹನ್‌ ಸಿಂಗ್‌ ಅವರು ತಾವು ಪ್ರಧಾನಿಯಾಗಿದ್ದಾಗ 2011ರಲ್ಲೇ ಹೇಳಿದ್ದರು.

ಅಲ್ಲದೆ ನಕಲಿ ಜಾಬ್‌ಕಾರ್ಡ್‌ಗಳನ್ನು ಸೃಷ್ಟಿಸಲಾಗುತ್ತಿದೆ ಎಂಬುದನ್ನು ಸೋನಿಯಾ ಗಾಂಧಿ ಅವರೂ ಹೇಳಿದ್ದು, ಈ ಯೋಜನೆಯ ನಿಯಮಗಳಲ್ಲಿ ಇದ್ದ ಲೋಪಗಳನ್ನು ಪರಿಗಣಿಸಿ, ಕೂಲಂಕಷವಾಗಿ ಪರಿಶೀಲನೆ ನಡೆಸಿಯೇ ನರೇಂದ್ರ ಮೋದಿ ಅವರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಯೋಜನೆಯನ್ನು ಸಮರ್ಥಿಸಿಕೊಂಡರು.

RELATED ARTICLES
- Advertisment -
Google search engine

Most Popular