Thursday, April 3, 2025
Google search engine

Homeರಾಜ್ಯಏ.01 ರಿಂದ ಮನರೇಗಾ ಕೂಲಿ 370 ರೂ. ಹೆಚ್ಚಳ

ಏ.01 ರಿಂದ ಮನರೇಗಾ ಕೂಲಿ 370 ರೂ. ಹೆಚ್ಚಳ

ಬೆಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಕೌಶಲರಹಿತ ಕಾರ್ಮಿಕರ ದಿನದ ಕೂಲಿಯನ್ನು ಕೇಂದ್ರ ಸರಕಾರ ಪರಿಷ್ಕರಣೆ ಮಾಡಿದ್ದು, ನರೇಗಾ ಕಾರ್ಮಿಕರಿಗೆ ಸದ್ಯ ಇರುವ ದಿನಗೂಲಿ 349 ರೂ.ಗಳ ಬದಲು ಇನ್ನು 370 ರೂ. ಸಿಗಲಿದೆ. ದಿನಕ್ಕೆ 21 ರೂ. ಏರಿಕೆ ಆಗಲಿದ್ದು, ಎಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

ಗಂಡು ಮತ್ತು ಹೆಣ್ಣು ಕೂಲಿಕಾರರಿಬ್ಬರಿಗೂ ಇದು ಅನ್ವಯ. ಈ ಕೂಲಿ ಹೆಚ್ಚಳದಿಂದ ರಾಜ್ಯದಲ್ಲಿ ಪ್ರಸ್ತುತ ಇರುವ 45 ಲಕ್ಷಕ್ಕೂ ಅಧಿಕ ಜಾಬ್‌ಕಾರ್ಡ್‌ದಾರರಿಗೆ ಅನುಕೂಲವಾಗಲಿದೆ. ದುಡಿಯುವ ಪ್ರತೀ ಕೈಗೆ ವರ್ಷದಲ್ಲಿ 100 ದಿನ ಕೆಲಸ ಕೊಡಬೇಕು ಎಂಬುದು ನರೇಗಾ ಯೋಜನೆಯ ಉದ್ದೇಶ. ಅದರಂತೆ ಜಾಬ್‌ಕಾರ್ಡ್‌ ಹೊಂದಿದವರು 100 ದಿನ ಕೆಲಸ ಮಾಡಿದರೆ ದಿನಕ್ಕೆ 370 ರೂ.ಗಳಂತೆ ವರ್ಷದಲ್ಲಿ 37,000 ರೂ. ಪಡೆದುಕೊಳ್ಳಬಹುದು.

ಮನರೇಗಾ ಕಾಯ್ದೆಯಡಿ ಕೇಂದ್ರ ಸರಕಾರ ರಾಜ್ಯಾವಾರು ಕೂಲಿ ನಿಗದಿಪಡಿಸುತ್ತದೆ. ಆಯಾ ರಾಜ್ಯಗಳ ಕೃಷಿ ಕೂಲಿ ಹಾಗೂ ಹಾಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿ ಕೂಲಿ ದರದ ಏರಿಕೆ ಮೊತ್ತದ ನಿರ್ಣಯ ಮಾಡಲಾಗುತ್ತದೆ. ಅದರಂತೆ ಹರಿಯಾಣದಲ್ಲಿ ಗರಿಷ್ಠ 400 ರೂ. ಕೂಲಿ ನಿಗದಿಯಾಗಿದ್ದರೆ, ಅರುಣಾಚಲಪ್ರದೇಶ ಮತ್ತು ನಾಗಲ್ಯಾಂಡ್‌ನ‌ಲ್ಲಿ ಕನಿಷ್ಠ ತಲಾ 241 ರೂ. ಕೂಲಿ ನಿಗದಿಯಾಗಿದೆ.

ದಕ್ಷಿಣ ಭಾರತ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಕೇರಳ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲೇ ಹೆಚ್ಚು ಕೂಲಿ ಇದೆ. ಆಂಧ್ರಪ್ರದೇಶದಲ್ಲಿ ದಿನಕ್ಕೆ 307 ರೂ., ತೆಲಂಗಾಣ 307 ರೂ., ಕೇರಳ 369 ರೂ. ಮತ್ತು ತಮಿಳುನಾಡಿನಲ್ಲಿ 336 ರೂ. ಕೂಲಿ ನಿಗದಿಪಡಿಸಲಾಗಿದೆ.

50 ಲಕ್ಷ ಜನರಿಂದ ದುಡಿಮೆ

ರಾಜ್ಯದಲ್ಲಿ ಒಟ್ಟು 80.93 ಲಕ್ಷ ಕುಟುಂಬಗಳು ನರೇಗಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 45.32 ಲಕ್ಷ ಕುಟುಂಬಗಳು ಸಕ್ರಿಯವಾಗಿವೆ. 2024-25ರಲ್ಲಿ 28.7 ಲಕ್ಷ ಕುಟುಂಬಗಳ 50.93 ಲಕ್ಷ ಜನ ನರೇಗಾದಡಿ ಕೆಲಸ ಮಾಡಿದ್ದಾರೆ. ಇದರಲ್ಲಿ 37 ಲಕ್ಷ ಕುಟುಂಬಗಳು 100 ದಿನ ಕೆಲಸ ಮಾಡಿವೆ. 2.89 ಲಕ್ಷ ಕುಟುಂಬಗಳು 81ರಿಂದ 91ದಿನಗಳು ಕೆಲಸ ಮಾಡಿವೆ. 2025-25ರಲ್ಲಿ ಒಟ್ಟು 1,280 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಕರ್ನಾಟಕ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮಾಹಿತಿ ನೀಡಿದೆ.

RELATED ARTICLES
- Advertisment -
Google search engine

Most Popular