ಬಾಂಗ್ಲಾದೇಶದಲ್ಲಿಇತ್ತೀಚಿನ ರಾಜಕೀಯ ಅಶಾಂತಿಯ ಹಿನ್ನೆಲೆಯಲ್ಲಿ ಹಿಂದೂ ಸಮುದಾಯದ ಮೇಲಿನ ದಾಳಿಗಳು ಹೆಚ್ಚಾಗುತ್ತಿದ್ದು, ಯುವ ನಾಯಕ ಷರೀಫ್ ಓಸ್ಮಾನ್ ಹಾದಿ ಸಾವಿನ ನಂತರ ದೇಶಾದ್ಯಂತ ನಡೆದ ಪ್ರಕ್ಷುಬ್ಧತೆಯ ಪರಿಣಾಮವಾಗಿ, ಹಿಂದೂ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚುವ ಘಟನೆಗಳು ವರದಿಯಾಗಿವೆ. ಪಿರೋಜ್‌ಪುರ ಮತ್ತು ಚಟ್ಟೋಗ್ರಾಮ್ ಪ್ರದೇಶಗಳಲ್ಲಿ ಇಂತಹ ದಾಳಿಗಳು ಸಂಭವಿಸಿದ್ದು, ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ.
ಡಿಸೆಂಬರ್ 27ರಂದು ಪಿರೋಜ್‌ಪುರ ಜಿಲ್ಲೆಯ ಡುಮ್ರಿಟೋಲಾ ಗ್ರಾಮದಲ್ಲಿ ಹಿಂದೂ ಕುಟುಂಬದ ಮನೆಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಮನೆಯ ಐದು ಕೊಠಡಿಗಳು ಸಂಪೂರ್ಣ ಸುಟ್ಟುಹೋಗಿವೆ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ವ್ಯಾಪಕ ದಾಳಿಯ ಭಾಗವಾಗಿ ಸುಮಾರು 5 ದಿನಗಳಲ್ಲಿ ಚಟ್ಟೋಗ್ರಾಮ್‌ನಲ್ಲಿ 7 ಹಿಂದೂ ಕುಟುಂಬಗಳಿಗೆ ಸೇರಿದ ಮನೆಗಳನ್ನು ಸುಟ್ಟುಹಾಕಲಾಗಿದೆ. ಇನ್ನೂ ಬೆಳಗಿನ ಜಾವ ಎಲ್ಲರೂ ನಿದ್ದೆಯಲ್ಲಿದ್ದಾಗ ಈ ದಾಳಿ ನಡೆದಿದ್ದು, ದುಷ್ಕರ್ಮಿಗಳು ಕೋಣೆಯೊಳಗೆ ಬಟ್ಟೆಗಳನ್ನು ಸೇರಿಸಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೂ ಈ ಬಗ್ಗೆ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಹಿಂದೂ ದ್ವೇಷಿ ಜಿಹಾದಿಗಳು ಬೆಳಗಿನ ಜಾವ ಬೆಂಕಿ ಹಚ್ಚಿದ್ದು, ದೇಶದಲ್ಲಿ ಉಳಿದ ಹಿಂದೂ ಮನೆಗಳನ್ನು ಹೀಗೆ ಸುಡಲು ಬಯಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಗಳಿಗೆ ಯುವ ನಾಯಕ ಓಸ್ಮಾನ್ ಹಾದಿ ಸಾವು ಮುಖ್ಯ ಕಾರಣವಾಗಿದೆ. ಡಿಸೆಂಬರ್ 12ರಂದು ಅಪರಿಚಿತರು ಅವರ ಮೇಲೆ ಗುಂಡು ಹಾರಿಸಿದ್ದು, ಸಿಂಗಾಪುರದಲ್ಲಿ ಚಿಕಿತ್ಸೆಯ ವೇಳೆ ಸಾವನ್ನಪ್ಪಿದರು. ಹಾದಿ, ವಿದ್ಯಾರ್ಥಿ ಚಳವಳಿಯ ನಾಯಕರಾಗಿದ್ದು, ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ಜುಲೈ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸಾವು ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದಿದ್ದು, ಸಾವಿರಾರು ಜನರು ಬೀದಿಗಿಳಿದು ಮಾಧ್ಯಮ ಸಂಸ್ಥೆಗಳನ್ನು ಧ್ವಂಸ ಮಾಡಿದರು. ಇದರೊಂದಿಗೆ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚಾಗಿವೆ.
ಮೈಮೆನ್ಸಿಂಗ್‌ನಲ್ಲಿ ಧರ್ಮನಿಂದನೆ ಆರೋಪದ ಮೇಲೆ ದೀಪು ಚಂದ್ರ ದಾಸ್ ಎಂಬ ಹಿಂದೂ ಕಾರ್ಖಾನೆ ಕೆಲಸಗಾರನನ್ನು ಗುಂಪು ಕ್ರೂರವಾಗಿ ಹಲ್ಲೆ ಮಾಡಿ ಕೊಂದು ದೇಹ ಸುಟ್ಟುಹಾಕಿತು. ಇದು ಜಗತ್ತಿನಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಯಿತು.
ಮತ್ತೊಂದು ಘಟನೆಯಲ್ಲಿ ಅಮೃತ್ ಮಂಡಲ್ ಎಂಬ ಹಿಂದೂ ವ್ಯಕ್ತಿಯನ್ನು ಸುಲಿಗೆ ಆರೋಪದ ಮೇಲೆ ಕೊಲ್ಲಲಾಯಿತು. ಮೂಲಗಳ ವರದಿಯ ಪ್ರಕಾರ, ಕಳೆದ ಐದು ದಿನಗಳಲ್ಲಿ ರೌಜಾನ್ ಪ್ರದೇಶದ ಮೂರು ಸ್ಥಳಗಳಲ್ಲಿ ಏಳು ಹಿಂದೂ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಬಂಗಾಳಿ ಭಾಷೆಯ ಬೆದರಿಕೆ ಸಂದೇಶದಲ್ಲಿ ಹಿಂದೂಗಳು ಇಸ್ಲಾಂ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿ, ಮುಸ್ಲಿಮೇತರರ ಮನೆಗಳನ್ನು ಬಿಡುವುದಿಲ್ಲ ಎಂದು ಹೇಳಲಾಗಿದೆ.
ಪೊಲೀಸರು ಘಟನೆಗಳನ್ನು ತನಿಖೆ ಮಾಡುತ್ತಿದ್ದು, ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿ ಅಂತರ್ಧರ್ಮೀಯ ಸಾಮರಸ್ಯವನ್ನು ಕಾಪಾಡಲು ಕ್ರಮ ಕೈಗೊಂಡಿದ್ದಾರೆ. ಯೂನಸ್ ಕಚೇರಿಯು ಯಾವುದೇ ಆರೋಪಗಳು ಹಿಂಸೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಅಲ್ಲದೆ, ಆಗಸ್ಟ್ 2025ರಲ್ಲಿ ಶೇಖ್ ಹಸೀನಾ ಪದಚ್ಯುತಿ ನಂತರ ರಾಜಕೀಯ ನಿರ್ವಾತ ಉಂಟಾಗಿ ತೀವ್ರಗಾಮಿ ಶಕ್ತಿಗಳು ಹೊರಹೊಮ್ಮಿವೆ. ಇದು ಹಿಂದೂ ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಕಾರಣವಾಗಿದೆ. ಈ ಘಟನೆಗಳು ಬಾಂಗ್ಲಾದೇಶದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಸರ್ಕಾರ ಅಲ್ಪಸಂಖ್ಯಾತರ ಸುರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ಸಂಸ್ಥೆಗಳು ಒತ್ತಾಯಿಸಿವೆ.



