ಬಾಗಲಕೋಟ: ಚಂದ್ರಯಾನ ಯೋಜನೆ ಕುರಿತಂತೆ ಫೋಟೋವೊಂದನ್ನು ಹಂಚಿಕೊಂಡಿದ್ದ ನಟ, ರಾಜಕಾರಣಿ ಪ್ರಕಾಶ್ ರಾಜ್ ಸಂಕಷ್ಟ ಎದುರಾಗಿದೆ. ಚಂದ್ರಯಾನ್-3 ಯೋಜನೆಗೆ ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ಶ್ರೀರಾಮಸೇನೆ ಸಂಘಟನೆ ದೂರು ನೀಡಿದೆ.
ದೂರಿನಲ್ಲಿ ‘ನಟ, ರಾಜಕಾರಣಿ ಪ್ರಕಾಶ್ ರಾಜ್ ಅವರು ಚಂದ್ರಯಾನ್-3 ಯೋಜನೆ ವಿರುದ್ಧ ಅಪಹಾಸ್ಯ ಮಾಡಿದ್ದಾರೆ. ಇಸ್ರೋ ವಿಜ್ಞಾನಿಗಳ ಕುರಿತು ವ್ಯಂಗ್ಯವಾಡಿದ್ದಾರೆ. ಇಡೀ ದೇಶದ ಜನತೆಯ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕಾಶ್ ರಾಜ್ ಇಸ್ರೋ ಮಾಜಿ ಅಧ್ಯಕ್ಷರ ಫೋಟೋ ಬಳಸಿದ್ದ ಕಾರ್ಟೂನ್ ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, ಶ್ರೀರಾಮಸೇನೆ ಅಧ್ಯಕ್ಷ ನಂದು ಗಾಯಕ್‌ವಾಡ್ ನೇತೃತ್ವದಲ್ಲಿ ಸಂಘಟನೆ ದೂರು ನೀಡಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದೆ.
