ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಅಲ್ಲಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇನ್ನು, ದಕ್ಷಿಣ ಒಳನಾಡು ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲೂ ಕೂಡ ಸಾಧಾರಣ ಮಳೆಯಗಲಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಿಗೆ ನವೆಂಬರ್ 03ರವರೆಗೆ ಸಾಧಾರಣ ಮಳೆ, ನಂತರ ತುಂತುರು ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 28 ರಿಂದ ನವೆಂಬರ್ 05 ರವರೆಗೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗುವ ಸಂಭವವಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 03 ರವರೆಗೆ ಸಾಧಾರಣ ಮಳೆ, ಉಳಿದ ದಿನಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.