ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅರಣ್ಯ ಹಕ್ಕು ಕಾಯಿದೆ ಕತ್ತು ಹಿಸುಕುತ್ತಿದೆ ಎಂದು ಸಾಹಿತಿ ದೇವನೂರು ಮಹದೇವ ಆತಂಕ ವ್ಯಕ್ತಪಡಿಸಿದರು. ಆದಿವಾಸಿಗಳ ರಾಜಕೀಯ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಅರಣ್ಯ ಕಾಯ್ದೆಯನ್ನೇ ಧ್ವಂಸ ಮಾಡಿ ಕುತ್ತಿಗೆ ಹಿಸುಕಿಹಾಕಿದ್ದಾರೆ. ಇವರು ಹೋಗದೆ ಅರಣ್ಯ ಕಾಯ್ದೆ ಉಳಿಸಿಕೊಳ್ಳಲು ಸಾಧ್ಯವೇ ಎಂದು ದೇವನೂರ ಮಹಾದೇವ ಪ್ರಶ್ನಿಸಿದರು.
ಅರಣ್ಯ ಹಕ್ಕು ಕಾಯ್ದೆಯನ್ನೇ ನೋಡುವುದಾದರೆ ಮೋದಿ ಸರ್ಕಾರ ಅದಕ್ಕೆ ತಿದ್ದುಪಡಿ ತಂದು ಗ್ರಾಮಸಭೆಗಳ ಅಧಿಕಾರ ಕಿತ್ತು ಹಾಕಿದೆ. ಕಾಯ್ದೆಯ ರೆಂಬೆ ಕೊಂಬೆಗಳನ್ನು ಕತ್ತರಿಸಲಾಗುತ್ತಿದೆಯೋ ಅಥವಾ ಇಡೀ ಬೇರಿಗೆ ಕೊಡಲಿ ಇಡುತ್ತಿದೆಯೋ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ. ಅರಣ್ಯದ ಜೊತೆಗೆ ಆದಿವಾಸಿಗಳು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಆದರೆ ಗಣಿಗಾರಿಕೆಗಾಗಿ ಅರಣ್ಯವನ್ನೇ ನಾಶ ಮಾಡಿದರೆ ಆದಿವಾಸಿಗಳನ್ನು ಧ್ವಂಸ ಮಾಡಿದಂತೆ. ಅದಾನಿ-ಅಂಬಾನಿ ಮತ್ತಿತರ ಬಂಡವಾಳಶಾಹಿಗಳು ಕಾಡನ್ನು ಕೊಳ್ಳೆ ಹೊಡೆಯುವುದಕ್ಕಾಗಿ ಈ ರೀತಿ ಮಾಡಲಾಗಿದೆ. ಇಷ್ಟೆಲ್ಲ ಮಾಡುತ್ತಿರುವ ಈಗಿನ ಕೇಂದ್ರ ಸರ್ಕಾರ ಯಾರ ಪರ ಇದೆ ಯೋಚಿಸಿ ಎಂದರು.
ಸರ್ಕಾರಗಳು ಮೊದಲು ಆದಿವಾಸಿ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಿಸಬೇಕಿದೆ. ವಿಧಾನ ಸಭೆಯಲ್ಲಂತೂ ಪ್ರಾತಿನಿಧ್ಯ ಇಲ್ಲ, ಹಾಗಾಗಿ ವಿಧಾನ ಪರಿಷತ್ತಿನಲ್ಲಾದರೂ ನಾಮ ನಿರ್ದೇಶನ ಮಾಡಿ ಪ್ರಾತಿನಿಧ್ಯ ಕೊಡಬೇಕು. ಈ ರೀತಿಯ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡದಿದ್ದರೆ, ಅವರ ದನಿಗೆ ಅವಕಾಶವಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಏನು ಅರ್ಥ ಎಂದು ಪ್ರಶ್ನಿಸಿದರು. ಆದಿವಾಸಿಗಳಿಗೆ ಕಾಡಿನ ಮೇಲಿನ ಹಕ್ಕು ಸಹಜ ಹಕ್ಕಾಗಿದೆ. ಮೀಸಲಾತಿ ಸಂವಿಧಾನ ನೀಡಿದ ಹಕ್ಕಾಗಿದೆ. ಇವುಗಳು ನಮ್ಮ ಎರಡು ಕಣ್ಣುಗಳು ಇದ್ದ ಹಾಗೆ. ಇವನ್ನು ನಾವು ಹೋರಾಟ ಮಾಡಿಯಾದರೂ ಪಡೆದುಕೊಳ್ಳಬೇಕು ಎಂಬ ಛಲ ನಮ ಆದಿವಾಸಿಗಳಿಗೆ ಬೇಕಾಗಿದೆ. ಸಂಖ್ಯೆ ಇಲ್ಲ ಎಂದು ನೀವು ಹಿಂಜರಿಯಬೇಡಿ, ಆದರೆ ಅಪಾರವಾದ ನೈತಿಕ ಶಕ್ತಿ, ನ್ಯಾಯ ನಿಮ್ಮ ಕಡೆ ಇದೆ. ಇದರ ಮುಂದೆ ಸಂಖ್ಯೆ ನಿಲ್ಲೋಲ್ಲ ಎಂದರು.
ರಾಜ್ಯ ಮೂಲ ಆದಿವಾಸಿ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎನ್. ವಿಠ್ಠಲ್ ಮಾತನಾಡಿ, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಗ್ರಾಮಸಭೆಗಳ ಅಧಿಕಾರ ಮೊಟಕುಗೊಳಿಸುವ ಯತ್ನಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಇದರಿಂದ ಮೂಲ ಆದಿವಾಸಿಗಳ ಬದುಕು ಅತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ಅರಣ್ಯ ಹಕ್ಕು ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿ ಮಾಡಿದರೆ ಪ್ರತಿ ಆದಿವಾಸಿಗಳಿಗೆ ಕನಿಷ್ಟ ೫ ಎಕರೆ ಭೂಮಿ ಸಿಗುತ್ತದೆ. ಅದರಿಂದ ನೆಮ್ಮದಿಯ ಜೀವನ ನಡೆಸಬಹುದು. ಆದರೆ ಕಾಯ್ದೆ ಜಾರಿಗೆ ಬದಲಾಗಿ ಕೇಂದ್ರ ಸರ್ಕಾರ ತಿದ್ದುಪಡಿ ತರಲಾಗುತ್ತಿದೆ. ಇದರಿಂದ ಅರಣ್ಯ ಅಧಿಕಾರಿಗಳ ಕಿರುಕುಳ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮುದಾಯದ ಮುಖಂಡರು ಭಾಗವಹಿಸಿದ್ದರು.