ನವದೆಹಲಿ: ಪ್ರಧಾನಿಯಾಗಿ ನರೇಂದ್ರ ಮೋದಿ ಪದಗ್ರಹಣ ಕಾರ್ಯಕ್ರಮ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುತ್ತಿದೆ. ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ 18ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಮೋದಿ ಅವರ ಜೊತೆಗೆ ಕೆಲ ಸಂಸದರೂ ಕೂಡ ಕೇಂದ್ರ ಸಂಪುಟ ಸದಸ್ಯರಾಗಿ ಪದಗ್ರಹಣ ಮಾಡುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸುತ್ತಿದ್ದಾರೆ. ಈಶ್ವರ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೋದಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕಾರ ಗೌಪ್ಯತೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಅದ್ಧೂರಿ ಸಮಾರಂಭದಲ್ಲಿ ದೇಶ-ವಿದೇಶಗಳ ಪ್ರಮುಖ ನಾಯಕರು ಉಪಸ್ಥಿತರಿದ್ದಾರೆ. ಇನ್ನು ಸ್ಟಾರ್ ನಟ-ನಟಿಯರು, ಗಣ್ಯ ವ್ಯಕ್ತಿಗಳು ಸಹ ಭಾಗಹಿಸಿದ್ದಾರೆ. ಎನ್ಡಿಎ ಮೈತ್ರಿಪಕ್ಷಗಳ ವರಿಷ್ಠರು, ನೆರೆ ದೇಶಗಳು ಮತ್ತು ಹಿಂದೂ ಮಹಾಸಾಗರ ವ್ಯಾಪ್ತಿಯ ಗಣ್ಯರು ಹಾಗೂ ವಿಶೇಷ ಆಹ್ವಾನಿತರು ಪಾಲ್ಗೊಂಡಿದ್ದಾರೆ.
ಹಾಗೆಯೇ ಭಾರತೀಯ ರೈಲ್ವೆಯ ಒಟ್ಟು 10 ಜನ ಲೋಕೊ ಪೈಲಟ್‌ಗಳು, ತೃತೀಯ ಲಿಂಗಿಗಳು ಮತ್ತು ಕಾರ್ಮಿಕರು ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. 2014, 2019ರ ನಂತರ ಈ ಬಾರಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಪದಗ್ರಹಣ ಮಾಡುತ್ತಿದ್ದಾರೆ. ಈ ಮೂಲಕ 1952, 1957 ಮತ್ತು 1962ರಲ್ಲಿ ಸತತ ಮೂರು ಸಾರ್ವತ್ರಿಕ ಚುನಾವಣೆ ಗೆದ್ದು ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರೂ ಅವರ ದಾಖಲೆಯನ್ನು ಮೋದಿ ಸರಿಗಟ್ಟುತ್ತಿದ್ದಾರೆ.