ಶ್ರೀನಗರ (ಜಮ್ಮು–ಕಾಶ್ಮೀರ): ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ‘ವಿಕಸಿತ ಭಾರತ, ವಿಕಸಿತ ಜಮ್ಮು ಕಾಶ್ಮೀರ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಸುಮಾರು ₹5,000 ಕೋಟಿಗೂ ಅಧಿಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಭೇಟಿ ಹಿನ್ನಲೆ ಜಮ್ಮು–ಕಾಶ್ಮೀರದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ರ್‍ಯಾಲಿ ನಡೆಯುವ ಸ್ಥಳವಾದ ಬಕ್ಷಿ ಕ್ರೀಡಾಂಗಣದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಶ್ರೀನಗರದ ನಗರ ವಲಯವನ್ನು ಡ್ರೋನ್ ನಿಯಮಗಳು –2021ರ ನಿಯಮ 24(2)ರ ನಿಬಂಧನೆಗಳ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ತಾತ್ಕಾಲಿಕ ಕೆಂಪು ವಲಯ ಎಂದು ಘೋಷಿಸಿದ್ದು, ಅನಧಿಕೃತ ಡ್ರೋನ್ ಮತ್ತು ಕ್ವಾಡ್‌ಕಾಪ್ಟರ್‌ಗಳ ಹಾರಾಟ ನಿರ್ಬಂಧಿಸಲಾಗಿದೆ. ಕೆಂಪು ವಲಯದಲ್ಲಿ ಅನಧಿಕೃತ ಡ್ರೋನ್‌ಗಳು ಕಂಡುಬಂದರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಶ್ರೀನಗರ ಪೊಲೀಸರು ತಿಳಿಸಿದ್ದಾರೆ. 370ನೇ ವಿಧಿ ರದ್ದಾದ ನಂತರ ಜಮ್ಮು–ಕಾಶ್ಮೀರಕ್ಕೆ ಮೋದಿ ಅವರ ಮೊದಲ ಭೇಟಿ ಇದಾಗಿದೆ.