ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ನಡೆಸಿಕೊಡುವ ‘ಮನ್ ಕಿ ಬಾತ್’ನ ಈ ಬಾರಿಯ ಸಂಚಿಕೆಯಲ್ಲಿ, ಬಾಳೆ ದಿಂಡಿನಿಂದ ಗೊಬ್ಬರ, ಅದರ ನಾರಿನಿಂದ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸುತ್ತಿರುವ ಜಿಲ್ಲೆಯ ಉಮ್ಮತ್ತೂರಿನ ವರ್ಷಾ ಅವರ ಹೆಸರನ್ನು ಪ್ರಸ್ತಾಪಿಸಿ, ಅವರು ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಮೋದಿಯವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಅಂಶಗಳಿಂದ ಪ್ರೇರಣೆಗೊಂಡು, ಎಂಟೆಕ್ ಪದವೀಧರೆ ವರ್ಷಾ ಅವರು ಆಕೃತಿ ಇಕೊ ಫ್ರೆಂಡ್ಲಿ ಎಂಟರ್‌ಪ್ರೈಸಸ್ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಬಾಳೆ ದಿಂಡಿನಿಂದ ನಾರು ತೆಗೆದು ಅದರಿಂದ ಅಲಂಕಾರಿಕ ಮತ್ತು ಮನೆಯಲ್ಲಿ ಬಳಸಬಹುದಾದ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಭಾನುವಾರ ಪ್ರಸಾರವಾದ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಮನ್ ಕಿ ಬಾತ್ ಕಾರ್ಯಕ್ರಮ ಹಲವರಿಗೆ ಪ್ರೇರಣೆಯಾಗಿದೆ’ ಎಂದು ಹೇಳುತ್ತಾ, ವರ್ಷಾ ಮಾಡುತ್ತಿರುವ ಕೆಲಸವನ್ನು ವಿವರಿಸಿದರು.
‘ವರ್ಷಾ ಅವರು ಬಾಳೆದಿಂಡಿನಿಂದ ಜೈವಿಕ ಗೊಬ್ಬರ ತಯಾರಿಸಲು ಆರಂಭಿಸಿದರು. ಪ್ರಕೃತಿಯ ಬಗ್ಗೆ ತುಂಬಾ ಪ್ರೀತಿ ಹೊಂದಿರುವ ವರ್ಷಾ ಅವರ ಈ ಕೆಲಸ, ಇತರರಿಗೆ ಉದ್ಯೋಗ ಅವಕಾಶ ನೀಡಿದೆ’ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಂ.ಟೆಕ್ ಓದಿರುವ ವರ್ಷಾ ಅವರು ತಮ್ಮ ಪತಿ ಶ್ರೀಕಂಠಸ್ವಾಮಿ ಸಹಕಾರದೊಂದಿಗೆ ತಾಲ್ಲೂಕಿನ ಉಮ್ಮತ್ತೂರು ಬಳಿ ಇರುವ ತಮ್ಮ ಜಮೀನಿನಲ್ಲಿ ಒಂದೂವರೆ ವರ್ಷದ ಹಿಂದೆ ಪುಟ್ಟ ಘಟಕ ಆರಂಭಿಸಿದ್ದಾರೆ. ಎಂಟು ಜನರಿಗೆ ಉದ್ಯೋಗ ನೀಡಿದ್ದಾರೆ. ಬಾಳೆಗೊನೆ ಕಟಾವಿನ ನಂತರ ಅನುಪಯುಕ್ತವಾಗುವ ಬಾಳೆ ದಿಂಡಿನ ಕಾಂಡದಿಂದ ನಾರು ಸಂಗ್ರಹಿಸಿ, ಅದರಿಂದ ಚಾಪೆ, ಮ್ಯಾಟ್, ಕೈಚೀಲ, ಗಡಿಯಾರ ಸೇರಿದಂತೆ ವಿವಿಧ ಕರ ಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ.