ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಸಿಂಧೂರ ನಂತರ ಮೋದಿ ಈವರೆಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಭಾಷಣದಲ್ಲಿ ಏನು ಹೊರಹೊಮ್ಮಬಹುದು ಎಂಬುದರ ಬಗ್ಗೆ ಕುತೂಹಲ ಮನೆಮಾಡಿದೆ.
ಇಂದು ಸಂಜೆ ಭಾರತ–ಪಾಕಿಸ್ತಾನದ ಡಿಜಿಎಂಒಗಳ ನಡುವಿನ ಸಭೆ ನಡೆಯಲಿದ್ದು, ಕದನ ವಿರಾಮದ ನಂತರ ಇವರ ಮೊದಲ ಮಾತುಕತೆ ಆಗಲಿದೆ. ಈ ಸಭೆಯನ್ನು ಮಧ್ಯಾಹ್ನದಿಂದ ಸಂಜೆಗೆ ಮುಂದೂಡಲಾಗಿದೆ.
ಈ ಹಿಂದೆ ಬಿಹಾರದಲ್ಲಿ ಮಾತನಾಡಿದ್ದ ಮೋದಿ, ಪಹಲ್ಗಾಮ್‌ನಲ್ಲಿ ಮೃತಪಟ್ಟವರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಉಗ್ರರು ಮತ್ತು ಉಗ್ರರಿಗೆ ನೆರವು ನೀಡುವವರ ಕಲ್ಪನೆ ಮಾಡದ ರೀತಿಯಾಗಿ ನಾವು ತಿರುಗೇಟು ನೀಡುತ್ತೇವೆ ಎಂದು ಗುಡುಗಿದ್ದರು.
ಇಂದು ಪ್ರಧಾನಿ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್ ಅನಿಲ್ ಚೌಹಾಣ್ ಮತ್ತು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರೊಂದಿಗೆ ಪ್ರಸ್ತುತ ಪರಿಸ್ಥಿತಿಯ ಕುರಿತು ನಿರ್ಣಾಯಕ ಸಭೆ ನಡೆಸಿದ್ದಾರೆ.