ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ 17ನೇ ಕುಲಸಚಿವರಾಗಿ ವಾರದ ಹಿಂದಷ್ಟೇ ಅಧಿಕಾರ ಸ್ವೀಕಾರ ಮಾಡಿದ್ದ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಮೊಹಮ್ಮದ್ ನಯೀಮ್ ಮೊಮಿನ್ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ.
ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯಲಹಂಕ ವಲಯದ ಜಂಟಿ ಆಯುಕ್ತರಾಗಿ ನಿಯೋಜಿಸಿ ವರ್ಗಾಯಿಸಲಾಗಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಮೊಮಿನ್ ಬೀದರ್ ಮತ್ತು ಹಾಸನ ಜಿಲ್ಲೆಗಳಲ್ಲಿ ಸಹಾಯಕ ಆಯುಕ್ತರಾಗಿ, ವಿಧಾನ ಸೌಧದಲ್ಲಿ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಮೊಮಿನ್ ಅವರ ಈ ದಿಢೀರ್ ವರ್ಗಾವಣೆಗೆ ಕಾರಣ ತಿಳಿದು ಬಂದಿಲ್ಲ. ವಿವಿಯಲ್ಲಿ ಖಾಲಿಯಾಗಿರುವ ಕುಲಸಚಿವ ಹುದ್ದೆಯನ್ನು ಮುಂದಿನ ಆದೇಶದವರೆಗೆ ಪರಿಕ್ಷಾಂಗ ಕುಲಸಚಿವ ರಾಜು ಚೆನ್ನನ್ನವರ್ ಪ್ರಭಾರ ನೆಲೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
