ಮಾಜಿ ಕೇಂದ್ರ ಸಚಿವ ತೋಮರ್ ಇನ್ನು ಸ್ಪೀಕರ್, ಇಬ್ಬರು ಡಿಸಿಎಂಗಳ ಆಯ್ಕೆ
ನವದೆಹಲಿ: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಅವರು ಆಯ್ಕೆಯಾಗಿದ್ದಾರೆ.
ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಜ್ಜೈನಿ ಶಾಸಕ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಯಾರಾಗುವರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಮಾಜಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಅಸೆಂಬ್ಲಿ ಸ್ಪೀಕರ್ ಮಾಡಲಾಗಿದೆ.ಅವರ ಹೆಸರೂ ಸಿಎಂ ಹುದ್ದೆಗೆ ಬಲವಾಗಿ ಕೇಳಿಬಂದಿತ್ತು. ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಸಚಿವಾಲಯವನ್ನು ಮುನ್ನಡೆಸಿದ್ದ ತೋಮರ್ ಚೌಹಾಣ್ ಅವರ ನಂತರ ಉನ್ನತ ಹುದ್ದೆಗೆ ಏರಬಹುದು ಎಂಬ ಬಗ್ಗೆ ಚರ್ಚೆಯಾಗಿತ್ತು.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಬಿಜೆಪಿಯು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೆಸರಿಸಿದೆ. ಜಗದೀಶ್ ದಿಯೋರಾ ಮತ್ತು ರಾಜೇಶ್ ಶುಕ್ಲಾ ಅವರು ಮಧ್ಯಪ್ರದೇಶ ಉಪಮುಖ್ಯಮಂತ್ರಿಗಳಾಗಲಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಪಟೇಲ್, ನರೇಂದ್ರ ಸಿಂಗ್ ತೋಮರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಮಧ್ಯಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮ ಅಲ್ಲದೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಿ.ಎಂ ಸ್ಥಾನದ ಆಕಾಂಕ್ಷಿಗಳಾಗಿದ್ದರು.