ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳನ್ನು ಕೊಂಡುಕೊಳ್ಳುವುದು ಸುಲಭ ಸಾಧ್ಯ. ಆದರೆ ಸುಖ,ಶಾಂತಿ ನೆಮ್ಮದಿ ಖರೀದಿ ಅಸಾಧ್ಯ ಎಂದು ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು. ಸಾಲಿಗ್ರಾಮ ತಾಲೂಕಿನ ಹಾಡ್ಯ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಮೈಸೂರು -ಚಾಮರಾಜನಗರ ಜಿಲ್ಲಾ ಮಠಾಧಿಪತಿಗಳ ಗೋಷ್ಠಿ ಬಳಿಕ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ರಾಜೇಂದ್ರ ಮಹಾಸ್ವಾಮೀ ಜಿಯವರು ಸಮಾಜದ ಹಿತಕ್ಕಾಗಿ ಮಠಾಧಿಪತಿಗಳ ಗೋಷ್ಠಿಯನ್ನು ಶುರು ಮಾಡಿದರು. ಗೋಷ್ಠಿಯಲ್ಲಿ ಸಮಾಜಕ್ಕಾಗಿ ಪ್ರಾರ್ಥಿಸಿದ್ದೇವೆ. ಪ್ರತಿಯೊಬ್ಬರಿಗೂ ಇತರರ ಬಗ್ಗೆ ಪ್ರೀತಿ, ಸಹಾನುಭೂತಿ ಇದ್ದರೆ ನೆಮ್ಮದಿ ಪ್ರಾಪ್ತವಾಗಲಿದೆ ಎಂದರು.
ಗೋಷ್ಠಿಯಲ್ಲಿ ಗಾವಡಗೆರೆ ಮಠಾಧೀಶರಾದ ಶ್ರೀ ನಟರಾಜ ಸ್ವಾಮೀಜಿ ಸೇರಿದಂತೆ 30 ಮಂದಿ ಸ್ವಾಮೀಜಿಗಳು ಭಾಗವಹಿಸಿದ್ದರು. ಶಾಸಕ ಡಿ.ರವಿಶಂಕರ್ ಗೋಷ್ಠಿಗೆ ಅಗಮಿಸಿ ಶ್ರೀಗಳ ಆರ್ಶಿವಾದ ಪಡೆದರು.

ಇದೆ ವೇಳೆ ಯುಪಿಎಸ್ಸಿಯಲ್ಲಿ 263ನೇ ಸ್ಥಾನ ಪಡೆದ ಅಂಕನಹಳ್ಳಿ ಗ್ರಾಮದ ಎ.ಸಿ.ಪ್ರೀತಿ ಹಾಗೂ ರಾಜ್ಯ ಕಾರ್ಮಿಕ ಇಲಾಖೆ ಆಯುಕ್ತರಾದ ಹಾಡ್ಯ ಗ್ರಾಮದ ನಿವಾಸಿ ಐಎಎಸ್ ಅಧಿಕಾರಿ ಭಾರತಿ ಅವರನ್ನು ಸುತ್ತೂರು ಶ್ರೀಗಳು ಅಭಿನಂದಿಸಿದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್, ಕೃಷಿಕ ಸಮಾಜದ ನಿರ್ದೇಶಕ ನಾಗೇಶ್, ಹಾರಂಗಿ ಮಹಾಮಂಡಲ ನಿರ್ದೇಶಕ ಅಂಕನಹಳ್ಳಿ ಯತೀಶ್ ಸೇರಿದಂತೆ ಗ್ರಾಮದ ಹಲವು ಮುಖಂಡರು ಇದ್ದರು.