Monday, April 21, 2025
Google search engine

Homeಸ್ಥಳೀಯಅಭ್ಯರ್ಥಿಗಳ ಖರ್ಚು ವೆಚ್ಚಗಳ ಬಗ್ಗೆ ನಿಗಾ ವಹಿಸಿ: ಯೋಗೀಶ್ ಮಿಶ್ರ

ಅಭ್ಯರ್ಥಿಗಳ ಖರ್ಚು ವೆಚ್ಚಗಳ ಬಗ್ಗೆ ನಿಗಾ ವಹಿಸಿ: ಯೋಗೀಶ್ ಮಿಶ್ರ

ಮೈಸೂರು: ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ವೆಚ್ಚ ಮಾಡುವ ಹಣದ ಬಗ್ಗೆ ಪ್ರತಿ ದಿನ ನಿಗಾ ವಹಿಸಿ ವರದಿ ಸಲ್ಲಿಸುವಂತೆ ಚಾಮುಂಡೇಶ್ವರಿ ನರಸಿಂಹರಾಜ, ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರಗಳಿಗೆ  ವೆಚ್ಚ ವೀಕ್ಷಕರಾಗಿರುವ  ಯೋಗೀಶ್ ಮಿಶ್ರ ಅವರು  ಅಧಿಕಾರಿಗಳಿಗೆ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  4 ಕ್ಷೇತ್ರಗಳ ಸಹಾಯಕ ವೆಚ್ಚ ವೀಕ್ಷಕರ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಭೆ ನಡೆಸಿ ಮಾತನಾಡಿದರು.

ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ವಿ.ಟಿ ಹಾಗೂ ಇನ್ನಿತರೆ ತಂಡಗಳು ಜವಾಬ್ದಾರಿಯುತವಾಗಿ ಕೆಲಸ ನಡೆಸಿ ಅಭ್ಯರ್ಥಿಯು ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದರು.

 ಯಾವುದೇ ರೀತಿಯ ಗೊಂದಲಗಳಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದರು.

ಹಣದ ಬಲದ ಮೇಲೆ ಚುನಾವಣೆ ನಡೆಯಬಾರದು. ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಬೇಕು. ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿ ದಾಖಲೆ ರಹಿತ ಹಣ ಅಥವಾ ಇನ್ನಿತರೆ ವಸ್ತುಗಳು ಸಾಗಾಣಿಕೆಯಾಗದಂತೆ ನೋಡಿಕೊಳ್ಳಿ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಿಸಲು ನೇಮಕವಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಬ್ಯಾಂಕ್ ವಹಿವಾಟಿನ ಮೇಲೆ ನಿಗಾ ಬ್ಯಾಂಕ್ ಖಾತೆಗಳಲ್ಲಿ ನಡೆಯುವ ಸಂಶಯಾಸ್ಪದ ವಹಿವಾಟು, ಹತ್ತು ಲಕ್ಷ ಕ್ಕಿಂತ ಹೆಚ್ಚಿನ ಹಣ ವರ್ಗಾವಣೆ, ಒಂದು ಖಾತೆಯಿಂದ 10 ಕ್ಕಿಂತ ಹೆಚ್ಚಿನ ಖಾತೆಗೆ ಹಣ ವರ್ಗಾವಣೆ ಕುರಿತಂತೆ ಪ್ರತಿದಿನ ಪರಿಶೀಲನೆ ನಡೆಸಬೇಕು ಎಂದರು.

ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ಮಾತನಾಡಿ ಜಿಲ್ಲೆಯಲ್ಲಿ ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ವಿವಿಧ ತಂಡಗಳು, ಅಧಿಕಾರಿಗಳು, ಸ್ಥಾಪನೆಯಾಗಿರುವ  ಚೆಕ್ ಪೋಸ್ಟ್ ಗಳು ಹಾಗೂ ಇನ್ನಿತರೆ ಮಾಹಿತಿಗಳನ್ನು ವಿವರಿಸಿದರು.

ಸಭೆಯ ನಂತರ ಚುನಾವಣಾ  ವೆಚ್ಚ ವೀಕ್ಷಕರು ಜಿಲ್ಲಾ ಚುನಾವಣಾ ವೆಚ್ಚ ಮೇಲ್ವಿಚಾರಕರ ಕೋಶಕ್ಕೆ, ಜಿಲ್ಲಾ ಮಾಧ್ಯಮ ದೃಢೀಕರಣ ಹಾಗೂ ಉಸ್ತುವಾರಿ ಸಮಿತಿ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಡಿವೈಎಸ್ಪಿ ಮುತ್ತುರಾಜ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular