ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ, ವಾಲ್ಮೀಕಿ ನಿಗಮದಲ್ಲಿನ ಹಗರಣ ವಿಚಾರಗಳು ಚರ್ಚೆಯಾಗುವ ಸಾಧ್ಯತೆ ಇದೆ.
ಇಂದಿನಿಂದ ಜುಲೈ ೨೬ರವರೆಗೆ ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನ ನಡೆಯಲಿದೆ. ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ, ವಾಲ್ಮೀಕಿ ನಿಗಮದಲ್ಲಿನ ಹಗರಣ ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ, ಜೆಡಿಎಸ್ ಸಜ್ಜಾಗಿವೆ.
ಅಧಿವೇಶನದಲ್ಲಿ ಮುಡಾ ಸೈಟ್ ಹಂಚಿಕೆ, ವಾಲ್ಮೀಕಿ ಅಕ್ರಮವನ್ನೇ ಪ್ರಧಾನವಾಗಿ ಪ್ರಸ್ತಾಪಿಸಲು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಿರ್ಧರಿಸಿವೆ. ಇದಲ್ಲದೆ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿಗೆ ಬಳಕೆ, ಬೆಲೆ ಏರಿಕೆ, ಡೆಂಘೀ ನಿರ್ಲಕ್ಷ್ಯ, ಕಾನೂನು ಸುವ್ಯವಸ್ಥೆ ವಿಷಯಗಳು ಚರ್ಚೆಗೆ ಬರಲಿವೆ.
ಒಂದು ವೇಳೆ ಈ ಅಧಿವೇಶನಗಳು ಜನಮುಖಿಯಾಗಿ ಕೆಲಸ ಮಾಡಬೇಕೆಂಬ ಸಂಕಲ್ಪದಿಂದ ಕಾರ್ಯನಿರ್ವಹಿಸಿದರೆ, ಅದೊಂದು ಅದ್ಭುತ ಚಿಂತನ ಮಂಥನಗಳ ವೇದಿಕೆಯಾಗುತ್ತದೆ.೧೨ ನೆಯ ಶತಮಾನದ ವಚನಕ್ರಾಂತಿಯ ಅನುಭವ ಮಂಟಪದಂತೆ ವಿಚಾರಗಳು ಹೊರಹೊಮ್ಮುತ್ತದೆ. ಹೊಸ ಹೊಸ ಕಾನೂನುಗಳು, ಹಳೆಯ ನ್ಯೂನ್ಯತೆಯುಳ್ಳ ಕಾನೂನುಗಳಿಗೆ ತಿದ್ದುಪಡಿ, ಕಾರ್ಯಾಂಗದ ಮೇಲೆ ಸಂಪೂರ್ಣ ನಿಯಂತ್ರಣ, ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಪ್ರಾಮಾಣಿಕ ಅನುಷ್ಠಾನ, ಹೊಸ ಹೊಸ ಸಮಸ್ಯೆಗಳಿಗೆ ಹೊಸ ಹೊಸ ಪರಿಹಾರಗಳು, ಇಡೀ ನೋಡುಗರ, ಕೇಳುಗರ ಮನದಾಳದಲ್ಲಿ ಅದ್ಭುತ ಚಿಂತನೆಗಳ ಮಾದರಿಯಾಗಿ ಈ ಅಧಿವೇಶನವನ್ನು ಮಾಡಬಹುದು. ಒಬ್ಬೊಬ್ಬ ಶಾಸಕ ಜನಪ್ರತಿನಿಧಿಗಳು ಅಥವಾ ಮಂತ್ರಿ ಮಹೋದಯರು ತಮ್ಮೆಲ್ಲ ಅನುಭವಗಳನ್ನು, ಜ್ಞಾನವನ್ನು ಇಲ್ಲಿ ಪ್ರಾಮಾಣಿಕವಾಗಿ ಹಂಚಿಕೊಂಡರೆ ನಿಜಕ್ಕೂ ಅದೊಂದು ಬಹುದೊಡ್ಡ ಸಾಧನೆಯಾಗುತ್ತದೆ
ನ್ಯಾಯಾಲಯಗಳಲ್ಲಿ ವಕೀಲಿಕೆಗಳು ನಡೆದು ಅದಕ್ಕೆ ಅನೇಕ ಇತಿಮಿತಿಗಳಿರುತ್ತದೆ. ಆದರೆ ವಿಧಾನಸಭೆಯ ಅಧಿವೇಶನದಲ್ಲಿ ಆ ರೀತಿ ಯಾವುದೇ ಇತಿಮಿತಿ ಇರುವುದಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಮುಕ್ತ ಸ್ವಾತಂತ್ರ್ಯ ಹೊಂದಿರುತ್ತದೆ. ಇಲ್ಲಿ ಎಲ್ಲವನ್ನು ಬಿಡಿ ಬಿಡಿಯಾಗಿ, ಸಮಗ್ರವಾಗಿ, ಮುಕ್ತವಾಗಿ ಮಾತನಾಡಬಹುದು. ಅಷ್ಟೊಂದು ಅಭೂತಪೂರ್ವ ಸ್ವಾತಂತ್ರ್ಯ ಇದ್ದಾಗಿಯೂ ಈ ಅಧಿವೇಶನಗಳು ಭಯಂಕರ ಕೆಳಮಟ್ಟದ ದಗಾಕೋರ ಸಂಸ್ಥೆಗಳಂತೆ ಕಾರ್ಯನಿರ್ವಹಿಸುವುದು ನಿಜಕ್ಕೂ ಬೇಸರದ ಸಂಗತಿ. ಪಕ್ಷಗಳ ಸೈದ್ಧಾಂತಿಕ ನಿಲುವುಗಳ ಗುಲಾಮಗಿರಿಯಂತೆ ಸದಸ್ಯರು ಕಾರ್ಯನಿರ್ವಹಿಸುತ್ತಾರೆ
ಇದರ ಸುಧಾರಣೆಗೆ ಹೆಚ್ಚು ಮಹತ್ವ ಕೊಡಬೇಕಾಗಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಬೇಕಾಗಿದೆ. ಮಿತಿಮೀರಿದಲ್ಲಿ ಶಾಸಕ ಸ್ಥಾನವನ್ನೇ ರದ್ದುಗೊಳಿಸುವಂತಹ ಕಾನೂನು ಜಾರಿಯಾಗಬೇಕು. ಅಧಿವೇಶನದ ತೂಕ ಹೆಚ್ಚಾಗಬೇಕು. ಸರಳತೆ, ಪ್ರಾಮಾಣಿಕತೆ, ದಕ್ಷತೆ, ಪಾರದರ್ಶಕತೆ ಸೃಷ್ಟಿಯಾಗಬೇಕು. ಆಗ ಮಾತ್ರ ಈ ಅಧಿವೇಶನಗಳಿಗೆ ಪ್ರಾಮುಖ್ಯತೆ ಇರುತ್ತದೆ. ಇಲ್ಲದಿದ್ದರೆ ಇದೊಂದು ದುಂದು ವೆಚ್ಚದ, ಕಾಟಾಚಾರದ ಒಂದು ಶಿಷ್ಟಾಚಾರದ ನಡವಳಿಕೆ ಮಾತ್ರ ವಾಗುತ್ತದೆ
ಬಿಜೆಪಿ-ಜೆಡಿಎಸ್ ಗೆ ತಿರುಗೇಟು ನೀಡಲು ಸರ್ಕಾರವೂ ಕೂಡ ಸಜ್ಜಾಗಿದೆ. ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಶೇ ೪೦ ಕಮಿಷನ್ ಆರೋಪ, ಕೊರೊನಾ ಕಾಲದ ಹಗರಣ, ಬಿಟ್ ಕಾಯಿನ್ ಹಗರಣ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ವಿಪಕ್ಷಗಳಿಗೆ ತಿರುಗೇಟು ನೀಡಲು ಸರ್ಕಾರ ಚಿಂತನೆ ನಡೆಸಿದೆ.