ಶ್ರೀರಂಗಪಟ್ಟಣ : ಇಲ್ಲಿನ ಚಂದ್ರವನ ಆಶ್ರಮದಲ್ಲಿ 161ನೇ ಬೆಳದಿಂಗಳ ದೀಪಾರತಿ, ಧಾರ್ಮಿಕ ಕಾರ್ಯಕ್ರಮ ಮತ್ತು ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆಯಲ್ಲಿ 3ನೇ ಸ್ವಾಸ್ಥ್ಯ ಶಿಬಿರದ ಉದ್ಘಾಟನೆ ನೆರವೇರಿತು.
ದಿವ್ಯ ಸಾನಿಧ್ಯ ವಹಿಸಿದ್ದ ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರು ಭಕ್ತರನ್ನುದ್ದೇಶಿಸಿ ಮಾತನಾಡಿ, ಆಶ್ರಮದ ಇತಿಹಾಸ ಬೆಳೆದು ಬಂದ ಬಗೆ, ಸಮಾಜದ ಏಳಿಗೆಗೆ, ಅಭ್ಯುದಯಕ್ಕೆ ಸಾರ್ವಜನಿಕರ ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ 3 ದಿನಗಳ ಕಾಲ ಸ್ವಾಸ್ಥ್ಯ ಶಿಬಿರವನ್ನು ಏರ್ಪಡಿಸಿದ್ದು, ಈ ಶಿಬಿರದಲ್ಲಿ ತನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಹಾಗೂ ವಿವಿಧ ಚಿಕಿತ್ಸೆಗಳ ಮೂಲಕ ತಿಳಿಸಿಕೊಡಲಾಗುವುದೆಂದು ತಿಳಿಸಿದರು.

ದಿವ್ಯ ಸಂದೇಶ ನೀಡಿದ ಬೆಳಗಾಂ ಜಿಲ್ಲೆಯ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ, ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಭಿಕರನ್ನುದ್ದೇಶಿಸಿ ಮಾತನಾಡಿ, ಒಬ್ಬ ಸಂತನಾದವರು ಸಮಾಜಕ್ಕೋಸ್ಕರ ಸರ್ವಸಂಗ ಪರಿತ್ಯಾಗಿಯಾಗಿ ಭಕ್ತರ ಹಿತಕ್ಕಾಗಿ ಸದಾ ಶ್ರಮಿಸುವರು. ಇಂದಿನ ದಿನಮಾನದಲ್ಲಿ ಮಾನವ ತನ್ನ ಆರೋಗ್ಯವನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಲು ಇಂತಹ ಸ್ವಾಸ್ಥ್ಯ ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಜೀವನದಲ್ಲಿ ಹೊಂದಿಕೊಂಡು ಹೋದರೆ ಸಾಮರಸ್ಯವಿರುವುದು. ಅಹಂಕಾರದಿಂದ ವಿರಾಮ ಹೊಂದಿದರೆ ಆರಾಮವಾಗಿರಬಹುದೆಂಬ ಸರಳ ತತ್ವವನ್ನು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆ , ಅ.ಭಾ.ವೀ.ಮ. ಸಭಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ವೀಣಾ ಕಾಶಪ್ಪನವರು ಮಾತನಾಡಿ, ನಮ್ಮ ದೇಶದ ಪರಂಪರೆಯಲ್ಲಿ ನಮ್ಮ ಧರ್ಮ, ಸಂಸ್ಕಾರ ಉಳಿದಿದೆ, ನಮ್ಮ ಇತಿಹಾಸ ಉಳಿದಿದೆ ಎಂದರೆ ಅದು ಮಠ-ಮಾನ್ಯಗಳಿಂದ, ಪೂಜ್ಯರಿಂದ ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ. ಇಂತಹ ಬೆಳದಿಂಗಳ ಕಾರ್ಯಕ್ರಮದಂತಹ ಧಾರ್ಮಿಕತೆಯಿಂದ ಕೂಡಿದ ಪೂಜೆ-ಪುನಸ್ಕಾರಗಳಿಗೆ ಶ್ರೀಗಳು ಮಾರ್ಗದರ್ಶನ ನೀಡುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಬಹುದು. ನಾವು ನಮ್ಮ ಧರ್ಮ, ಸಂಸ್ಕೃತಿಗೆ ಬೆಲೆ ಕೊಡುವುದನ್ನು ಕಲಿಯಬೇಕು. ಗುರು ಪರಂಪರೆಯ ಮೇಲೆ ನಿಷ್ಠೆ, ಭಕ್ತಿ ಇಟ್ಟರೆ ಗುರುಗಳು ನಮ್ಮನ್ನು ಕಾಯುವರು. ನಾವು ಸಾಧನೆ ಮಾಡಬೇಕಾದಾಗ ಬರುವ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು, ಜೀವನದಲ್ಲಿ ಎದುರಾಗುವ ಏಳು-ಬೀಳುಗಳನ್ನು ಸಮರ್ಪಕವಾಗಿ ನಿಭಾಯಿಸಿ ನಮ್ಮ ಆತ್ಮಶಕ್ತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಆಧ್ಯಾತ್ಮ ಮತ್ತು ಗುರುಗಳ ಮಾರ್ಗದರ್ಶನ ಬಹಳ ಮುಖ್ಯವಾದುದು. ತಪ್ಪು ದಾರಿಯಲ್ಲಿ ನಡೆದಾಗ ತಿದ್ದಿತೀಡಿ ಸರಿದಾರಿಗೆ ತರುವವರೇ ಗುರುಗಳು ಎಂದರು.
ಮೈಸೂರಿನ ಸಿವಿಲ್ ನ್ಯಾಯಾಧೀಶರಾದ ಶಿಲ್ಪ ಮಾತನಾಡಿ, ಗುರುಗಳನ್ನು ನಾವು ಆರಿಸುವುದಕ್ಕೆ ಸಾಧ್ಯವಿಲ್ಲ, ನಮ್ಮನ್ನು ಗುರುಗಳು ಆರಿಸಬೇಕು. ಇಂತಹ ಗುರುಗಳು ಮತ್ತು ಆಶ್ರಮಗಳಿರುವುದರಿಂದಲೇ ನಮ್ಮ ಸಂಸ್ಕೃತಿ ಬೆಳೆಯುತ್ತಾ ಇದೆ. ಇದನ್ನು ನಾವು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಅ.ಭಾ.ವೀ.ಲಿಂ.ಮ. ಸಭಾದ ಅಧ್ಯಕ್ಷ ಸುರೇಶ್. ಎಸ್ ಹಾಗೂ ಶ್ರೀರಂಗಪಟ್ಟಣದ ಕ್ಷಣಾಂಭಿಕ ದೇವಸ್ಥಾನದ ಪ್ರಧಾನ ಅರ್ಚಕ ವೇ.ಬ್ರ. ಶ್ರೀ ರಾಘವೇಂದ್ರ ಶಾಸ್ತ್ರೀಗಳು ಮತ್ತು ಸುಮನ್ ರೆಡ್ಡಿ, ಮಂಡ್ಯ ಜಿಲ್ಲೆಯ ಅ.ಭಾ.ವೀ.ಲಿಂ.ಮ.ಸಭಾದ ಅಧ್ಯಕ್ಷ ತಾಳಶಾಸನ ಆನಂದ್, ಡಾ.ಎಂ.ಎಸ್. ಮಧುಮತಿ, ಡಾ. ಎನ್. ನಾಗೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಶ್ರಮದ ಆಡಳಿತಾಧಿಕಾರಿಗಳಾದ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿ ಟಿ.ಪಿ. ಶಿವಕುಮಾರ್ ಹಾಗೂ ವಿದ್ವಾನ್ ಕೆ. ಗಂಗಣ್ಣ ಉಪಸ್ಥಿತರಿದ್ದರು.
ದಾಸೋಹ ಸೇವೆಯನ್ನು ಬೆಂಗಳೂರಿನ ಹಿರಿಯ ಉಪ ನೋಂದಣಾಧಿಕಾರಿಗಳಾದ ಗಿರೀಶ್ ಚಂದ್ರ ನೆರವೇರಿಸಿದರು.



