ಮೈಸೂರು: ಸುತ್ತೂರು ಮಠದಲ್ಲಿ ನಾಳೆ ಮೇ ೨೩ ರಂದು ಗುರುವಾರ ಸಂಜೆ ೬.೦೦ ಗಂಟೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಬೆಳದಿಂಗಳ ಸಂಗೀತ-೨೬೭ರ ಅಂಗವಾಗಿ ವಿದ್ವಾನ್ ವಿನಯ್ ಶರ್ವರವರಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿದ್ವಾನ್ ವಿನಯ್ ಶರ್ವರವರು ಕರ್ನಾಟಕದ ಯುವ ಸಂಗೀತಗಾರರಲ್ಲಿ ಅಗ್ರಪಂಕ್ತಿಯ ಪ್ರತಿಭಾಶಾಲಿಗಳು. ಏಳನೆಯ ವಯಸ್ಸಿನಿಂದಲೇ ಕರ್ನಾಟಕ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ಸುಮಾರು ಎರಡು ದಶಕಗಳ ಕಾಲ ಬೆಂಗಳೂರಿನ ಹಿರಿಯ ಕಲಾವಿದರಾದ ವಿದ್ವಾನ್ ಎಸ್. ಶಂಕರ್‌ರವರಲ್ಲಿ ಶಿಷವೃತ್ತಿ ಮಾಡಿದರು. ಅನಂತರ ಡಾ. ನೇದನೂರಿ ಕೃಷಮೂರ್ತಿಯವರ ಬಳಿ ಅಧ್ಯಯನ ಮಾಡಿದರು. ಆಕಾಶವಾಣಿಯ ಎ ಶ್ರೇಣಿ ಕಲಾವಿದರು. ದೂರದರ್ಶನ ವಾಹಿನಿಗಳಲ್ಲಿಯೂ ಕಾರ್ಯಕ್ರಮ ನೀಡುತ್ತಿದ್ದಾರೆ. ಹಲವಾರು ಸಿಡಿ, ಕ್ಯಾಸೆಟ್‌ಗಳಿಗೆ ಸಂಗೀತ ಸಂಯೋಜನೆ ನೀಡಿದ್ದಾರೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಎನ್‌ಐ ಪ್ರೈ.ಲಿ. ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ತ್ರಿಸ್ಥಾಯಿಗಳಲ್ಲೂ ಸುಗಮವಾಗಿ ಸಂಚರಿಸುವ ಶಾರೀರ, ಪ್ರಶಾಂತ ಮನೋಧರ್ಮ, ಶಾಸ್ತ್ರನಿಷ, ಸಂಪ್ರದಾಯಪಾಲನೆ, ಮಾಧುರ್ಯ ಇವರ ಸಂಗೀತದ ವೈಶಿಷ. ವಿದ್ವಾನ್ ಶರ್ವರವರಿಗೆ ಡಾ. ಎಂ.ಎಸ್. ಸುಬ್ಬಲಕ್ಷ್ಮಿ ಶಿಷವೇತನ, ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಪುರಸ್ಕಾರ, ರಾಷ್ಟ್ರೀಯ ಯುವ ಪುರಸ್ಕಾರ, ರಾಗಲಯ ಪ್ರಭೆ, ವಿಜಯಕಲಾಕೌಸ್ತುಭ, ಪುರಂದರ ವಿಠಲ ಪ್ರಶಸ್ತಿ, ರಾಗರತ್ನ, ಕಲಾವತಂಸ, ಅನನ್ಯ ಪ್ರತಿಭಾ ಪುರಸ್ಕಾರ, ನಾದಚೂಡಾಮಣಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ವಯೊಲಿನ್ ಸಹಕಾರ ನೀಡಲಿರುವ ವಿದುಷಿ ಸಿ.ವಿ. ಶ್ರುತಿಯವರು ಸಂಗೀತದ ಕೌಟುಂಬಿಕ ಹಿನ್ನೆಲೆಯುಳ್ಳವರು. ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ತಾತನವರಾದ ಸಿ.ಎಸ್. ನಾಗರಾಜ್‌ರವರಿಂದ ಕಲಿತರು. ಬಳಿಕ ಮೈಸೂರಿನ ಖ್ಯಾತ ವಯೊಲಿನ್ ವಿದ್ವಾಂಸರಾದ ಎಚ್.ಕೆ. ನರಸಿಂಹಮೂರ್ತಿಯವರ ಬಳಿ ಶಿಷ್ಯವೃತ್ತಿ ಕೈಗೊಂಡರು. ಪ್ರಸ್ತುತ ಅಕ್ಕರೈ ಸಹೋದರಿಯರಲ್ಲಿ ಉನ್ನತ ಸಂಗೀತ ಶಿಕ್ಷಣ ಮುಂದುವರಿಕೆ. ಗಾನಭಾರತಿ ಸಂಸ್ಥೆಯು ನಡೆಸಿದ ನಾದಕಿಶೋರೋತ್ಸವದಲ್ಲಿ (೨೦೧೯) ಅತ್ಯುತ್ತಮ ಪಕ್ಕವಾದ್ಯ ಸಾಥಿ ಪ್ರಶಸ್ತಿ; ನಾದಮಯ ಸಂಸ್ಥೆಯಿಂದ (೨೦೨೨) ವಯೊಲಿನ್ ಸೋಲೋ ಮತ್ತು ಪಕ್ಕವಾದ್ಯ ಎರಡರಲ್ಲೂ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿ ಬಂದಿವೆ. ಮೈಸೂರು ಆಕಾಶವಾಣಿಯ “ಎ” ಶ್ರೇಣಿ ಕಲಾವಿದರು.
ಮೃದಂಗ ಸಹಕಾರ ನೀಡಲಿರುವ ವಿದ್ವಾನ್ ಕೆ. ವಿಷವರ್ಧನರವರು ಪ್ರತಿಭಾನ್ವಿತ ಕಲಾವಿದ. ೧೦ನೆಯ ವರ್ಷದಿಂದಲೇ ವಿದ್ವಾನ್ ಟಿ.ಎಸ್. ಚಂದ್ರಶೇಖರ ಅವರಲ್ಲಿ ಮೃದಂಗ ವಾದನದ ಪ್ರಾರಂಭಿಕ ಶಿಕ್ಷಣ ಪಡೆದರು. ಪ್ರಸ್ತುತ ವಿದ್ವಾನ್ ಆರ್. ಅನಂತಕೃಷ್ಣರವರ ಬಳಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಇವರು ಆಕಾಶವಾಣಿ ಮತ್ತು ದೂರದರ್ಶನಗಳ ಬಿ ಶ್ರೇಣಿ ಕಲಾವಿದರು. ಭಾರತದ ಹಲವಾರು ನಗರಗಳಲ್ಲಿ ಮತ್ತು ಅಮೆರಿಕದ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಿಶೋರ ಪ್ರತಿಭೆ, ಬೆಂಗಳೂರು ಗಾಯನ ಸಮಾಜ ಮತ್ತು ಲಯವಾದ್ಯ ಕೇಂದ್ರ ಮುಂತಾದ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕೃತರು.

ಘಟಂ ವಾದನ ನೀಡಲಿರುವ ವಿದ್ವಾನ್ ಶ್ರೀನಿಧಿ ಆರ್. ಕೌಂಡಿನ್ಯರವರು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸುತ್ತಿರುವ ಘಟಂ ಕಲಾವಿದರು. ವಿದ್ವಾನ್ ಹೆಚ್.ಎಲ್. ಶಿವಶಂಕರ್‌ಸ್ವಾಮಿಯವರ ಬಳಿ ಸುಮಾರು ೧೬ ವರ್ಷ ಅಧ್ಯಯನ ಮಾಡಿ ವಾದನದ ಸೂಕ್ಷ್ಮತೆಗಳನ್ನು ಕಲಿತರು. ಬಳಿಕ ವಿದುಷಿ ಸುಕನ್ಯಾ ರಾಮಗೋಪಾಲ್‌ರವರ ಬಳಿ ಘಟಂ ಅಭ್ಯಾಸ ಮಾಡಿದರು. ಘಟಂನಲ್ಲಿ ಏಕವ್ಯಕ್ತಿ ವಾದನ ಮತ್ತು ಪಕ್ಕವಾದ್ಯ ಸಹಕಾರ ಎರಡರಲ್ಲೂ ಪರಿಣತಿ ಗಳಿಸಿದ್ದಾರೆ. ಆಕಾಶವಾಣಿಯ ‘ಎ’ ಶ್ರೇಣಿ ಕಲಾವಿದರು. ಫೈನಾನ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವೀಧರರು. ಬೆಂಗಳೂರಿನ ನಾದಹಂಸ ಅಕ್ಯಾಡೆಮಿಯ “ಯುವ ಲಯವಾದ್ಯ ಪ್ರತಿಭಾ ಕುಸುಮ” ಪ್ರಶಸ್ತಿ, ಎಸ್‌ಪಿಎನ್ ಮ್ಯೂಸಿಕ್ ಅಕ್ಯಾಡೆಮಿಯ “ಉದಯೋನ್ಮುಖಿ-೨೦೨೨” ಪ್ರಶಸ್ತಿಗಳು ಲಭಿಸಿವೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಕೋರಿದೆ.
