ಗುಂಡ್ಲುಪೇಟೆ: ದಕ್ಷಿಣ ಭಾರತದಲ್ಲಿಯೇ ಹೆಚ್ಚು ಬಾಲ್ಯ ವಿವಾಹ ಪ್ರಕರಣ ನಡೆಯುತ್ತಿರುವ ಕರ್ನಾಟಕದಲ್ಲಿ ಎಂದು ವಕೀಲರಾದ ಮಾಧು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಹಂಗಳ ಗ್ರಾಮದ ಪಂಚಾಯಿತಿ ಸಭಾ ಭವನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ಪೋಕ್ಸೋ ಕಾಯ್ದೆ-2012, ಮಕ್ಕಳ ಹಕ್ಕುಗಳು ಹಾಗೂ ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯ್ದೆ-1986 ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹವು ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿತ್ತು. ಹಿಂದಿನ ಕಾಲದ ಅಜ್ಜಿಯಂದಿರನ್ನು ಕೇಳಿದರೆ ನಮಗೆ 10, 12ನೇ ವರ್ಷಕ್ಕೆ ಮದುವೆ ಆಯ್ತು ಎಂದು ಹೇಳುತ್ತಾರೆ. ಅವರು ಅವಿದ್ಯಾವಂತರಾಗಿರುವ ಕಾರಣ ಅಂದಿನ ದಿನಮಾನದಲ್ಲಿ ಬಾಲ್ಯ ವಿವಾಹವಾಗುತ್ತಿದ್ದರು. ಆದರೆ ಕಾಲ ಬದಲಾದಂತೆ ಬಾಲ್ಯ ವಿವಾಹ ನಿಷೇಧಕ್ಕೆ 2006ರಲ್ಲಿ ಕಾಯ್ದೆ ಜಾರಿಗೆ ತಂದು ಕಠಿಣಗೊಳಿಸಲಾಗಿದೆ. ಆದ್ದರಿಂದ ಯಾರು ಕೂಡ ಬಾಲ್ಯವಿವಾಹ ಮಾಡಲು ಮುಂದಾಗಬಾದರು ಎಂದು ಸಲಹೆ ನೀಡಿದರು.
ಗ್ರಾಮಿಣ ಪ್ರದೇಶದಲ್ಲಿ ಕಾನೂನಿನ ಅರಿವಿನ ಕೊರತೆ ಕಾರಣದಿಂದ ಬಾಲ್ಯ ವಿವಾಹಗಳು ನಡೆಯುತ್ತಲೆ ಇದೆ. ಹಂಗಳ ಗ್ರಾಪಂ ವ್ಯಾಪ್ತಿಯಲ್ಲಿಯೇ ವರ್ಷದಲ್ಲಿ ಐದು ಬಾಲ್ಯ ವಿವಾಹ ಪ್ರಕರಣ ವರದಿಯಾಗಿರುವುದು ಕಳವಳಕಾರಿ ಸಂಗತಿ. ಆದ್ದರಿಂದ ಬಾಲ್ಯ ವಿವಾಹ ತಡೆಗೆ ಗ್ರಾಮಸ್ಥರು, ಪೋಷಕರು ಸ್ಥಳೀಯ ಜನ ಪ್ರತಿನಿಧಿ, ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ವೃಷಬೇಂದ್ರ, ನಾಗರಾಜು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ, ಪಿಡಿಓ ಶಾಂತಮಲ್ಲಪ್ಪ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.