ತುಮಕೂರು: ಬೀಗರ ಊಟ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಾಗೇನಹಳ್ಳಿ ತಾಂಡಾದಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಪಾವಗಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನಾಗೇನಹಳ್ಳಿ ತಾಂಡಾದವರು ಪಕ್ಕದ ಶ್ರೀರಂಗಪುರ ತಾಂಡಾದಲ್ಲಿ ಬೀಗರ ಊಟ ಸೇವಿಸಿದ್ದು, ಹಾಗೆ ಸೇವಿಸಿದವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಉಪಚರಿಸಲಾಗಿದೆ. ಶಾಸಕ ವೆಂಕಟೇಶ್ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರ ಆರೋಗ್ಯ ವಿಚಾರಿಸಿದ್ದಾರೆ. ಅಧಿಕಾರಿಗಳು ನಾಗೇನಹಳ್ಳಿ ತಾಂಡಾಗೆ ತೆರಳಿ ಕುಡಿಯುವ ನೀರಿನ ಪರೀಕ್ಷೆ ನಡೆಸಿದ್ದು, ನೀರಿನಿಂದ ಯಾವುದೇ ಸಮಸ್ಯೆ ಆಗಿಲ್ಲ ಎನ್ನುವುದು ಖಚಿತವಾಗಿದೆ. ಹೀಗಾಗಿ ಫುಡ್ ಪಾಯಿಸನಿಂಗ್‌ನಿಂದಲೇ ಆರೋಗ್ಯದಲ್ಲಿ ಏರುಪೇರಾಗಿರುವ ಶಂಕೆ ಮೂಡಿದೆ.