ಮಾಸ್ಟರ್ ಆನಂದ್ ಅಭಿನಯದಲ್ಲಿ “ನಾ ಕೋಳಿಕ್ಕೆ ರಂಗ’ ಎಂಬ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇನ್ನು ಈ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದು ಕೋಳಿ ಹಾಗೂ ರಂಗನ ನಡುವಿನ ಕಥಾಹಂದರದ ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ. “ನಾ ಕೋಳಿಕ್ಕೆ ರಂಗ’ ಸಿನಿಮಾದಲ್ಲಿ ಮಾಸ್ಟರ್ ಆನಂದ್ ಅವರಿಗೆ ರಾಜೇಶ್ವರಿ ನಾಯಕಿಯಾಗಿ ಜೋಡಿಯಾಗಿದ್ದಾರೆ.
ಉಳಿದಂತೆ ಹಿರಿಯ ನಟಿ ಭವ್ಯಾ, ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿ ರಾಜೇಶ್ವರಿ ಅವರ ತಂದೆ ಚಿತ್ರದುರ್ಗ ಮೂಲದ ಎಸ್. ಟಿ. ಸೋಮಶೇಖರ್ ತಮ್ಮ ಪುತ್ರಿಯ ಸಿನಿಮಾ ಮೇಲಿನ ಆಸಕ್ತಿಯನ್ನು ಕಂಡು “ಶ್ರೀದುರ್ಗಾಂಜನೇಯ ಮೂವೀಸ್’ ಬ್ಯಾನರಿನಲ್ಲಿ “ನಾ ಕೋಳಿಕ್ಕೆ ರಂಗ’ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಗೊರವಾಲೆ ಮಹೇಶ್ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದೊಂದು ರೀತಿ ಟ್ರಯಂಗಲ್ ಸ್ಟೋರಿ. ಹಾಗಂತ ಲವ್ ಸ್ಟೋರಿ ಅಲ್ಲ. ಕೋಳಿ, ರಂಗ ಮತ್ತು ಅಮ್ಮನ ವಾತ್ಸಲ್ಯದ ಕಥೆ ಈ ಸಿನಿಮಾದಲ್ಲಿದೆ. ಕೋಳಿ ಮತ್ತು ಅಮ್ಮನ ಮೇಲೆ ರಂಗನಿಗೆ ಇನ್ನಿಲ್ಲದ ಪ್ರೀತಿ. ಮುಂದೆ ಎದುರಾಗುವ ಘಟನೆ ಒಂದರಲ್ಲಿ ರಂಗನಿಗೆ ಈ ಎರಡರಲ್ಲಿ ಯಾವುದು ಮುಖ್ಯ ಆಗುತ್ತೆ ಎಂಬುದೇ ಸಿನಿಮಾದ ಕಥೆಯ ಒಂದು ಎಳೆ. ಮಂಡ್ಯ ಭಾಗದಲ್ಲೇ ಶೇ. 90 ರಷ್ಟು ಚಿತ್ರೀಕರಣ ಮಾಡಲಾಗಿದೆ. ಹಳೇ ಮೈಸೂರು ಸೊಗಡಿನ ಭಾಷೆ ಸಿನಿಮಾದಲ್ಲಿದೆ ಎನ್ನುತ್ತದೆ ಚಿತ್ರತಂಡ.
“ನಾ ಕೋಳಿಕ್ಕೆ ರಂಗ’ ಚಿತ್ರಕ್ಕೆ ಧನಪಾಲ್, ಬೆಟ್ಟೇಗೌಡ ಛಾಯಾಗ್ರಹಣ, ವಿಶ್ವ ಸಂಕಲನವಿದೆ. ರಾಜು ಎಮ್ಮಿಗನೂರು ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ತನ್ನ ಟೈಟಲ್ ಪೋಸ್ಟರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ “ನಾ ಕೋಳಿಕ್ಕೆ ರಂಗ’ ಸಿನಿಮಾವನ್ನು ಇದೇ ನ. 10 ರಂದು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.