Friday, April 4, 2025
Google search engine

Homeರಾಜ್ಯಮೈಸೂರಿನಲ್ಲಿ ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಗೆ ಸಂಸದ ಯದುವೀರ್‌...

ಮೈಸೂರಿನಲ್ಲಿ ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಗೆ ಸಂಸದ ಯದುವೀರ್‌ ಮನವಿ

ಮೈಸೂರು: ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳಿಗೆ ನೆರವು ಒದಗಿಸಬೇಕೆಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರಿಗೆ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ.

ಈ ಸಂಬಂಧ ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿರುವ ಅವರು, ಮೈಸೂರಿನ ಪಾರಂಪರಿಕತೆಗೆ ತಕ್ಕಂತೆ ಎಲ್‌ಐಸಿ ಸರ್ಕಲ್‌ ಬಳಿ ಅರ್ಜುನ ಆನೆಗೆ ಸ್ಮಾರಕ ಮತ್ತು ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಯೋಗ ಮ್ಯೂಸಿಯಂ ಆಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

‘ಮೈಸೂರಿನ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೆಲವು ಯೋಜನೆಗಳ ಕುರಿತು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವರ ಜತೆ ಚರ್ಚಿಸಲಾಗಿದೆ. ಪ್ರಮುಖವಾಗಿ ದಸರಾ ಆನೆ ಅರ್ಜುನ ಸ್ಮರಣಾರ್ಥ ಸ್ಮಾರಕ ಹಾಗೂ ಯೋಗ ಮ್ಯೂಸಿಯಂ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ, ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮೈಸೂರು ಮತ್ತು ದಸರಾ ಆನೆಗಳ ನಡುವೆ ಭಾವನಾತ್ಮಕ ಸಂಬಂಧವಿದೆ. ಎಲ್ಲರ ಮನ ಸೆಳೆದಿದ್ದ ಅರ್ಜುನ ಆನೆ ದುರದೃಷ್ಟವಶಾತ್‌ ನಮ್ಮನ್ನು ಅಗಲಿದೆ. ಹಲವು ವರ್ಷಗಳ ಕಾಲ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಗಾಂಭೀರ್ಯದಿಂದ ಸಾಗಿದ ಈ ಗಜ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿಅರ್ಜುನ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸಚಿವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಬೇಗ ಇದು ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ’ ಎಂದು ಸಂಸದರು ತಿಳಿಸಿದ್ದಾರೆ.

ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯನ್ನು ಯೋಗ ಮ್ಯೂಸಿಯಂ ಆಗಿ ಪರಿವರ್ತಿಸುವ ಬಗ್ಗೆಯೂ ಮನವಿ ಮಾಡಿದ್ದೇನೆ. ಈಗಾಗಲೇ ಇದನ್ನು ನವೀಕರಣ ಮಾಡಲು ರಾಜ್ಯ ಸರಕಾರವು ಸ್ವದೇಶಿ ದರ್ಶನ್‌ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಯೋಗದ ಮಹತ್ವ ಮತ್ತು ಯೋಗದ ಶ್ರೀಮಂತ ಇತಿಹಾಸವನ್ನು ಪ್ರಚುರಪಡಿಸಲು ಅನುವಾಗುವಂತೆ ಮ್ಯೂಸಿಯಂ ನಿರ್ಮಿಸಲು ಕೇಂದ್ರ ಸರಕಾರ ಕೂಡ ರಾಜ್ಯ ಸರಕಾರಕ್ಕೆ ಸಲಹೆ ನೀಡಲು ಮನವಿ ಸಲ್ಲಿಸಲಾಗಿದೆ ಎಂದರು.

RELATED ARTICLES
- Advertisment -
Google search engine

Most Popular