ಮೈಸೂರು : ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಗ್ರ ಪರಿಶೀಲನೆ ನಡೆಸಿ, ತಾಯಿ-ಮಕ್ಕಳ ಆರೈಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಯದುವೀರ್, ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಇಂಥ ಪ್ರಕರಣ ವರದಿಯಾಗಿರುವುದು ವಿಷಾದನೀಯ ಎಂದಿದ್ದಾರೆ.
ಮಾಧ್ಯಮಗಳಲ್ಲಿ ಬಂದ ವರದಿಗಳು ನೋಡಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ, ರೋಗಿಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ನಿರ್ಧರಿಸಿ ಇಲ್ಲಿಗೆ ಬಂದು ಪರಿಶೀಲನೆ ನಡೆಸಲಾಯಿತು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು. ಇದೇ ರೀತಿಯ ಧೋರಣೆ ಮುಂದುವರಿದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಸಂಸದ ಯದುವೀರ್ ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲಾಯಿತು. ಎನ್ ಐಸಿಯು ಘಟಕಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಎಲ್ಲ ವಿಭಾಗದಲ್ಲೂ ಎಲ್ಲ ವೈದ್ಯಕೀಯ ಸಾಧನಗಳನ್ನು ಸೂಕ್ತ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ನಿರ್ವಹಣೆಗಾಗಿ ಮೀಸಲಿರುವ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಡೀನ್ ಮತ್ತು ವೈದ್ಯಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ರೋಗಿಗಳೊಂದಿಗೆ ಸಂಸದ ಯದುವೀರ್ ಒಡೆಯರ್ ಸಮಾಲೋಚನೆ ನಡೆಸಿದಾಗ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ದೂರು ಸಲ್ಲಿಸಿದರು.ಇದಕ್ಕೆ ಅತ್ಯಂತ ತುರ್ತಾಗಿ ಸ್ಪಂದಿಸಿದ ಸಂಸದ ಯದುವೀರ್ ಒಡೆಯರ್ ಕೂಡಲೇ ಬಿಸಿನೀರಿನ ಡಿಸ್ಪೆನ್ಸರ್ ಅನ್ನು ತಮ್ಮ ವೈಯಕ್ತಿಕ ಹಣದಿಂದ ತರಿಸಿ ರೋಗಿಗಳಿಗೆ ನೀಡಿದರು.
ಇದಕ್ಕೆ ಅಪಾರ ಆನಂದ ವ್ಯಕ್ತಪಡಿಸಿದ ರೋಗಿಗಳು, ಪೋಷಕರು, ನಮ್ಮ ಸಂಸದರು ಇಷ್ಟು ತ್ವರಿತವಾಗಿ ಈ ಸೌಲಭ್ಯ ಒದಗಿಸಿರುವುದು ನಿಜಕ್ಕೂ ಖುಷಿಯಾಗಿದೆ. ಈ ಸಂಸದರು ನಮಗೆ ಎಂದಿಗೂ ಇರಬೇಕು. ಇಂಥ ಸಹೃದಯ ಸಂಸದರಿಂದ ನಮಗೆ ಹಲವಾರು ಅನುಕೂಲಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನಾನುರಾಗಿ ಸಂಸದರಿಂದ ಇನ್ನಷ್ಟು ಸೌಲಭ್ಯಗಳನ್ನು ಬಯಸುತ್ತೇವೆ. ಅವರು ನಮಗೆ ಎಲ್ಲ ವ್ಯವಸ್ಥೆ ಮಾಡಿಕೊಡುತ್ತಾರೆ. ಈ ರೀತಿಯ ಭರವಸೆಯನ್ನು ಸಂಸದ ಯದುವೀರ್ ಒಡೆಯರ್ ಈಡೇರಿಸಲಿದ್ದಾರೆ ಎಂದು ರೋಗಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಯದುವೀರ್ ಒಡೆಯರ್, ತಮ್ಮ ಪೂರ್ವಿಕರು ಸ್ಥಾಪಿಸಿರುವ ಈ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗೆ ಆದ್ಯತೆ ನೀಡಲು ಎಲ್ಲರೂ ಬದ್ಧರಾಗಿರಬೇಕು. ರೋಗಿಗಳು ಹಾಗೂ ಪೋಷಕರು ಬಯಸಿದಂತೆ ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.



