ಮೈಸೂರು: ಮೈಸೂರಿನಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಅದರಲ್ಲೂ ಪ್ರಮುಖವಾಗಿ ಮಣಿಪಾಲ ಜಂಕ್ಷನ್ ಬಳಿ ಫ್ಲೈ ಓವರ್ ನಿರ್ಮಾಣ ಸಂಬಂಧ ತ್ವರಿತ ಕ್ರಮ ಕೈಗೊಳ್ಳುವಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೋರಿದರು.
ಈ ಸಂಬಂಧ ನವದೆಹಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ರನ್ನು ಭೇಟಿ ಮಾಡಿದ ಅವರು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹಾದಿಯಲ್ಲಿರುವ ಬರುವ ಕೆಂಪೇಗೌಡ ವೃತ್ತ (ಮಣಿಪಾಲ ಜಂಕ್ಷನ್)ದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಿದರೆ ಆಗುವ ಅನುಕೂಲಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಸಂಸದರು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸಕಾರಾತ್ಮಕವಾಗಿ ಮುಖ್ಯ ಕಾರ್ಯದರ್ಶಿ ಸ್ಪಂದಿಸಿದ್ದಾರೆ. ಈ ಯೋಜನೆಯು ಮೈಸೂರಿಗೆ ಮೈಲಿಗಲ್ಲು ಯೋಜನೆಯಾಗಿದೆ. ಫ್ಲೈ ಓವರ್ ನಿರ್ಮಾಣಗೊಂಡರೆ ಅಪಘಾತಗಳು ಕಡಿಮೆಯಾಗಲಿವೆ, ಪ್ರಯಾಣದ ಸಮಯ ಇಳಿಕೆಯಾಗಲಿದೆ, ಜೊತೆಗೆ ಸಾರಿಗೆ ದಟ್ಟಣೆ ನಿವಾರಣೆಯಾಗಿ, ಮೈಸೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ಹಾದಿ ಸುಗಮವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಮೈಸೂರು-ಕುಶಾಲನಗರ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸುವ ಕುರಿತು ಸಂಸದರು ಮುಖ್ಯ ಕಾರ್ಯದರ್ಶಿಗಳ ಜೊತೆ ಸಮಾಲೋಚನೆ ನಡೆಸಿದರು. ಕ್ಷೇತ್ರಕ್ಕೆ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡುವಲ್ಲಿ ಉದಾರತೆ ತೋರುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಅಭಿನಂದಿಸಿದ್ದಾರೆ.



