ರಾಮನಗರ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಸಕ್ರಿಯತೆಯಿಂದ ಕಾರ್ಯನಿರ್ವಹಿಸಬೇಕಿದ್ದು, ರಾತ್ರಿಯ ವೇಳೆ ಆಂಬುಲೆನ್ಸ್ ಸೇವೆ ಸಮರ್ಪಕವಾಗಿರಬೇಕು. ತಮಿಳುನಾಡಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಆಂಬುಲೆನ್ಸ್ ಸೇವೆ ದೊರಕುತ್ತಿಲ್ಲ ಎಂಬುದು ತಿಳಿದುಬಂದಿದ್ದು, ಅದಕ್ಕಾಗಿ ಸಿಎಸ್‌ಆರ್ ನಿಧಿಯಲ್ಲಿ ೪ ಆಂಬುಲೆನ್ಸ್ ಗಳನ್ನು ಮೂರು ತಿಂಗಳಿನೊಳಗೆ ಒದಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಲೋಕಸಭಾ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಭರವಸೆ ನೀಡಿದರು.
ಅವರು ಆ. ೨೭ರ ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರು.
ನಾಲ್ಕು ಆಂಬುಲೆನ್ಸ್ ಗಳನ್ನು ಕೇವಲ ಗಡಿ ಭಾಗದ ಜನರ ಸೇವೆಗೆ ಮೀಸಲಿರಿಸಬೇಕು. ಸಾತನೂರು ಹಾಗೂ ಕನಕಪುರದ ಕೋಳಗೊಂಡನಹಳ್ಳಿಯಲ್ಲಿ ವೈದ್ಯರಿಲ್ಲ ಎಂಬ ದೂರಿದ್ದು, ರಾಮನಗರ ಬಿಟ್ಟು ಕೆಲವೆಡೆ ಸಮಸ್ಯೆಗಳಿವೆ. ಜಿಲ್ಲೆಯ ಗಡಿಗಳಿಂದ ಆಂಬುಲೆನ್ಸ್ ಬದಲಾಗುತ್ತಿವೆ. ಹೀಗಾಗಿ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಯಾವುದೇ ಮಿತಿಗಳಿಲ್ಲದೇ ಆಂಬುಲೆನ್ಸ್ ಗಳು ಸಂಚರಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ೫೪ ನರ್ಸ್ ಹುದ್ದೆಗಳು ಖಾಲಿ ಇವೆ. ಪೊಲೀಸ್‌ರ ಸಹಕಾರದೊಂದಿಗೆ ವಾಟ್ಸ್‌ಅಪ್ ಗ್ರೂಪ್ ರಚಿಸಿ, ತುರ್ತು ಸೇವೆಗಳಂತೆ ಆಂಬೂಲೆನ್ಸ್ಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ನರ್ಸಿಂಗ್ ಕಾಲೇಜುಗಳಿಗೂ ಈ ಬಗ್ಗೆ ಮಾಹಿತಿ ನೀಡಬೇಕು. ಈಗ ನೀಡುತ್ತಿರುವ ೧೩ ಸಾವಿರ ರೂ.ಗಳ ಬದಲಿಗೆ ೨೦ ಸಾವಿರ ರೂ.ಗಳನ್ನು ನೀಡುವಂತೆ ಕೇಂದ್ರ ಸಚಿವರಿಗೂ ಮನವಿ ಮಾಡಲಾಗಿದೆ ಎಂದರು.
ಹೈ ರಿಸ್ಕ್ ಡೆಲಿವರಿ ಸೇರಿದಂತೆ ರಾತ್ರಿ ಪಾಳಯದಲ್ಲಿ ಜಿಲ್ಲಾ ಆಸ್ಪತ್ರೆಯು ಮತ್ತಷ್ಟು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಸಿದ್ದವಾಗಬೇಕು, ಒಬಿಜಿ, ರೇಡಿಯಾಲಜಿ, ಇತರೆ ಚಟುವಟಿಕೆಗಳಿಗಾಗಿ ಸುತ್ತಮುತ್ತಲಿನ ಮೂರು ಖಾಸಗಿ ಮೆಡಿಕಲ್ ಕಾಲೇಜಿನೊಂದಿಗೆ ಚರ್ಚಿಸಿ ಅವುಗಳ ಸಹಕಾರ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಅವರಿಗೆ ಸಂಸದರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ನೀರು ನಿಲ್ಲದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದು ಸಂಸದರು ತಿಳಿಸಿದಾಗ, ಡೆಂಗ್ಯೂಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೩,೦೦೦ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇದೂವರೆಗೂ ಒಬ್ಬರು ಮೃತಪಟ್ಟಿದ್ದಾರೆ, ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಸಭೆಗೆ ಮಾಹಿತಿ ನೀಡಿದರು.
ತಾಯಿ ಮಗು, ಅಲ್ಟ್ರಾಸೌಂಡ್ ಸ್ಕ್ಯಾನಿಗ್, ಯಂತ್ರೋಪಕರಣಗಳ ಕೊರತೆ, ರೆಡಿಯೋಲಜಿಸ್ಟ್ಗಳು, ಎಂಆರ್‌ಐ, ಸಿಟಿ ಸ್ಕ್ಯಾನಿಗ್, ಎಮರ್ಜೆನ್ಸಿ ರೆಸ್ಪಾನ್ಸ್, ಪಿಆರ್‌ಒ ಡೆಸ್ಕ್, ತುರ್ತು ಸೇವೆಗಳು, ನಿರ್ಮಾಣಗೊಳ್ಳಬೇಕಿರುವ ೫೦ ಹಾಸಿಗೆಯ ಕ್ರಿಟಿಕಲ್ ಕೇರ್ ಸೆಂಟರ್, ಮ್ಯಾಮೊಗ್ರಫಿ, ಆರೋಗ್ಯ ಮೇಳ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚೆಯಾಯಿತು.
ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ ೮೪೦ ಮಿಲಿ ಮೀಟರ್ ಮಳೆಯ ಪ್ರಮಾಣವಿದ್ದು, ಈ ಬಾರಿ ಹೆಚ್ಚಿನ ಮಳೆಯಾಗಿದೆ, ಶೇ.೭೭ರಷ್ಟು ಬಿತ್ತನೆಯಾಗಿದೆ. ರಾಗಿ ಪ್ರಮುಖ ಬೆಳೆಯಾಗಿದ್ದು, ೨೧ ಸಾವಿರ ಮೆಟ್ರಿಕ್ ಟನ್ ಪೈಕಿ ೧೩ ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಅದನ್ನು ವಿತರಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಂಬಿಕಾ ಸಭೆಗೆ ತಿಳಿಸಿದರು.
ಈ ವೇಳೆ ಸಂಸದರು ಮಾತನಾಡಿ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕ್ಷೇತ್ರ ಭೇಟಿ ಕೈಗೊಳ್ಳಬೇಕು, ಆ ಮೂಲಕ ರೈತರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ತಳಮಟ್ಟದಲ್ಲಿಯೇ ತಿಳಿದುಕೊಳ್ಳಬೇಕು ಹಾಗೂ ಆ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಯತ್ನ ಮಾಡಬೇಕು, ಭೂಮಿಯ ಫಲವತ್ತತೆ ಕುಂಠಿತಗೊಳ್ಳುತ್ತಿರುವ ವರದಿ ಬರುತ್ತಿದ್ದು, ಫಲವತ್ತತೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಹವಾಮಾನ ಆಧಾರಿತ ವಿಮಾ ಯೋಜನೆಯಡಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸುವಂತೆ ಜಾಗೃತಿ ಮೂಡಿಸಬೇಕೆಂದರು.
ವಿಮೆಯಲ್ಲಿ ೫ ಪ್ರಕರಣಗಳಷ್ಟೆ ತಿರಸ್ಕೃತಗೊಂಡಿವೆ, ಇನ್ನುಳಿದ ಎಲ್ಲ ಅರ್ಜಿಗಳಿಗೂ ವಿಮೆಯ ಹಣ ಜಮೆಯಾಗಿದೆ. ಆನೆ ದಾಳಿಗೆ ಅರಣ್ಯ ಇಲಾಖೆಯಿಂದ ವಿಮೆ ಹಣ ಪಾವತಿಯಾಗಲಿದೆ, ಕೃಷಿ ಇಲಾಖೆಯಿಂದ ನಿರಂತರವಾಗಿ ಸ್ಥಳ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ವಾರಕ್ಕೊಂದು ದಿನವಾದರು ಪರಿಶೀಲಿಸಲಾಗುವುದು. ಜಿಲ್ಲೆಯಲ್ಲಿ ಯೂರಿಯಾ ಬಳಕೆ ಹೆಚ್ಚಾಗಿದೆ. ಹೀಗಾಗಿ ಮಣ್ಣಿನ ಸಾವಯವ ಗುಣ ಕಡಿಮೆಯಾಗಿದೆ. ಸಿಬ್ಬಂದಿಗಳ ಕೊರತೆ ಹೆಚ್ಚಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅಂಬಿಕಾ ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು ೬೨,೭೪೩ ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಪ್ರದೇಶವಿದೆ, ಇದರಲ್ಲಿ ೨೭,೯೦೦ ಹೆಕ್ಟರ್‌ನಲ್ಲಿ ತೆಂಗು ಹಾಗೂ ೨೭,೭೨೩ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ವರ್ಷ ಅತ್ಯಂತ ಉಷ್ಣಾಂಶದಿಂದಾಗಿ ಮಾವು ಬೆಳೆ ಸಂಪೂರ್ಣ ಕೈಕೊಟ್ಟಿದೆ ಎಂದು ಇಲಾಖೆ ಅಧಿಕಾರಿಗಳು ವಿವರಿಸಿದರು. ಜಿಲ್ಲೆಯಿಂದ ಒಟ್ಟು ೧.೮೫ ಲಕ್ಷ ಪ್ರಿಮಿಯಂ ಅನ್ನು ಜಿಲ್ಲೆಯಿಂದ ಇರಿಸಲಾಗಿದೆ. ಕಳೆದ ವರ್ಷ ಇದಕ್ಕೆ ಪ್ರತಿಯಾಗಿ ೧೪೧ ಲಕ್ಷ ಹಣ ವಿಮೆ ಪಾವತಿಯಾಗಿದೆ ಎಂದರು.
೨೧ ಸಾವಿರ ಹೆಕ್ಟರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಇಲಾಖೆಯಲ್ಲಿ ೪೧ ಸಿಬ್ಬಂದಿಯಷ್ಟೆ ಕೆಲಸ ಮಾಡುತ್ತಿದ್ದು, ೧೨೩ ಸಿಬ್ಬಂದಿಗಳ ಕೊರತೆ ಇದೆ ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಬಸವರಾಜು ವಿವರಿಸಿದರು.