ಮಂಗಳೂರು(ದಕ್ಷಿಣ ಕನ್ನಡ): ಎಂಆರ್ ಪಿಎಲ್ ಕಂಪೆನಿಯ ಒಳಭಾಗದಿಂದ (ಪೆಟ್ ಕೋಕ್ ಘಟಕದ ಬಳಿಯಿಂದ) ದುರ್ಗಮ ಪ್ರದೇಶದಲ್ಲಿ ಮಾರಕ ಕೈಗಾರಿಕಾ ತ್ಯಾಜ್ಯ ಹರಿದು ಬರುವ ಕಾಲುವೆಯನ್ನು ಹೋರಾಟ ಸಮಿತಿಯ ಪ್ರಮುಖರೂ, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯರೂ ಆದ ಅಬೂಬಕ್ಕರ್ ಬಾವ ಹಾಗೂ ಇಕ್ಬಾಲ್ ಅಹ್ಮದ್ ಪತ್ತೆ ಹಚ್ಚಿದ್ದು, ಕಾಂಕ್ರೀಟ್ ಸ್ಲಾಬ್ ಹಾಕಿ ಮುಚ್ಚಿರುವ ಕಾಲುವೆಯ ಮೂಲಕ ದೊಡ್ಡ ಪ್ರಮಾಣದಲ್ಲಿ ನೀರಿನ ಹರಿವಿನ ಜೊತೆಗೆ ಎಂಆರ್ಪಿಎಲ್ ಕೈಗಾರಿಕಾ ತ್ಯಾಜ್ಯ ತೋಕೂರು ಹಳ್ಳ ಸೇರುವುದು ಅಧಿಕೃತವಾಗಿ ಈಗ ಪತ್ತೆಯಾಗಿದೆ ಎಂದು ಹೋರಾಟ ಸಮಿತಿ ಹೇಳಿದೆ.
ಕಳೆದ ಮೂರು ವಾರಗಳಿಗೂ ಅಧಿಕ ದಿನಗಳಿಂದ ಫಲ್ಗುಣಿ ನದಿಗೆ ತೋಕೂರು ಹಳ್ಳದ ಮೂಲಕ ಎಂಆರ್ ಪಿಎಲ್ ಕಂಪೆನಿ ವಿಷಕಾರಿ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುತ್ತಿದೆ ಎಂದು ನಾಗರಿಕ ಹೋರಾಟ ಸಮಿತಿ ಆರೋಪಿಸಿತ್ತು.
ಇದಕ್ಕೆ ಸಾಕ್ಷಿ ಎಂಬಂತೆ ಎಂಆರ್ಪಿಎಲ್ ಕಡೆಯಿಂದ ಹರಿದು ಬರುವ ತೋಕೋರು ಹಳ್ಳದ ನೀರು ಕಪ್ಪು ಬಣ್ಣಕ್ಕೆ ತಿರುಗಿ ಪೆಟ್ರೋಲ್ ವಾಸನೆಯಿಂದ ನಾರುತ್ತಿತ್ತು. ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತಂದು, ಪ್ರತಿದಿನ ಆಧಾರ ಸಹಿತ ತೋಕೂರು ಹಳ್ಳದ ಹೀನಾಯ ಸ್ಥಿತಿಯನ್ನು ಸಾಮಾಜಿಕ ಜಾಲತಾಣ, ಸುದ್ದಿ ಮಾಧ್ಯಮಗಳ ಮೂಲಕ ಗಮನ ಸೆಳೆಯುತ್ತಿದ್ದರೂ ಜಿಲ್ಲಾಡಳಿತ ಅನುಮಾನಾಸ್ಪದ ರೀತಿಯಲ್ಲಿ ಗಾಢ ಮೌನ ವಹಿಸಿತ್ತು.
ಬೇಸಗೆಯಲ್ಲಿ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗುವುದರಿಂದ ಈ ಸ್ಥಿತಿ ಉಂಟಾಗಿರಬಹುದು, ವಸತಿ ಪ್ರದೇಶದ ಬಚ್ಚಲು ನೀರು ಹರಿದು ಹೀಗೆ ಆಗಿರಬಹುದು ಎಂಬ ಬಾಲಿಷ ಉತ್ತರ ನೀಡಲಾಗುತ್ತಿತ್ತು ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.