ಕೈಗಾರಿಕಾ ತ್ಯಾಜ್ಯ ಸುದ್ದಿ ಸಂಗ್ರಹಕ್ಕೆ ವಾಹಿನಿಗಳ ವರದಿಗಾರರು ತೆರಳಿ ಹಿಂತಿರುಗಿದ ಬಳಿಕ ಕಂಪನಿಯಿಂದ ಎಚ್ಚರಿಕೆ
ಮಂಗಳೂರು (ದಕ್ಷಿಣ ಕನ್ನಡ): ಕಂಪೆನಿಯ ಒಪ್ಪಿಗೆ ಇಲ್ಲದೆ ಸುತ್ತಲ ಪ್ರದೇಶವನ್ನು ವೀಕ್ಷಣೆ ಮಾಡುವುದು, ನೀರು, ಪರಿಸರದ ಫೋಟೊ, ವೀಡಿಯೊ ಮಾಡುವ ಹಾಗಿಲ್ಲ ಎಂದು ಎಂಆರ್‌ಪಿಎಲ್ ಅಧಿಕಾರಿಗಳು ಸ್ಥಳೀಯರಿಗೆ ಎಚ್ಚರಿಕೆ ನೀಡುವ ಮಟ್ಟಿಗೆ ಬೆಳೆದಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಮಂಗಳೂರಿನ ಫಲ್ಗುಣಿ ನದಿಗೆ ಎಂಆರ್‌ಪಿಎಲ್ ಕಡೆಯಿಂದ ಮಾರಕ ಕೈಗಾರಿಕಾ ತ್ಯಾಜ್ಯ ಹರಿಯಬಿಟ್ಟು ತೋಕೂರು ಹಳ್ಳ ಪೂರ್ತಿ ಮಲಿನ ಗೊಂಡಿರುವ ಸ್ಥಳಕ್ಕೆ ಸುದ್ದಿ ಸಂಗ್ರಹಕ್ಕೆ ವಾಹಿನಿಗಳ ವರದಿಗಾರರು ಬಂದು ಹಿಂದಿರುಗಿದ ಬಳಿಕ ಕಂಪೆನಿ ಈ ಎಚ್ಚರಿಕೆ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.
ಈ ವೇಳೆ ಎಚ್ಚರಿಕೆ ನೀಡಿದ ಸೆಕ್ಯೂರಿಟಿ ಅಧಿಕಾರಿ ಮತ್ತು ಎಂಆರ್‌ಪಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುನೀರ್, ನೀವು ಆಡಿದ್ದೇ ಆಟ ಎನ್ನುವ ದುರಹಂಕಾರ ಕಂಪೆನಿಗೆ ಇದೆ. ಅದೆಲ್ಲ ಇಲ್ಲಿ ನಡೆಯಲ್ಲ. ನಮ್ಮ ನೆಲ ಜಲದ ವೀಕ್ಷಣೆ ನಾವು ಮಾಡುತ್ತೇವೆ. ಎಂಆರ್ ಪಿಎಲ್ ಒಳಗೆ ಬಂದು ಫೋಟೊ, ವೀಡಿಯೊ ಮಾಡುತ್ತಿಲ್ಲ. ಕಾಂಪೌಂಡ್ ಹೊರಗಿನಿಂದ ಮಾಡಲು ನಿಮ್ಮ ಅನುಮತಿ ಪಡೆಯುವ ಅವಶ್ಯಕತೆಯೂ ಇಲ್ಲ.
ನಮ್ಮ ಊರಿನ ನದಿ ವೀಕ್ಷಿಸಬಾರದು, ಈ ಭಾಗದ ರಸ್ತೆಯಾಗಿ ಸಂಚರಿಸಬಾರದು ಎಂದು ಜಿಲ್ಲಾಧಿಕಾರಿಯಿಂದ ಅಧಿಸೂಚನೆ ತನ್ನಿ, ಆ ಬಳಿಕ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಕಂಪೆನಿಯ ಮಾರ್ಗವಾಗಿ ತೆರಳುವ ರಸ್ತೆಯನ್ನು ಬ್ಯಾರಿಕೆಟ್ ಗಳನ್ನು ಹಾಕಿ ಮುಚ್ಚುವುದು, ಜನಸಂಚಾರಕ್ಕೆ ಅಡಚಣೆ ಊಂಟು ಮಾಡುವ ಕೆಲಸ ಕಂಪೆನಿಂದ ಆಗುತ್ತಿದೆ. ಇಂತಹ ಜನವಿರೋಧಿ ನೀತಿಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.