ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ ಅವರಿಂದು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ. ಮುಡಾ ಪ್ರಕರಣದ ಎಫ್ಐಆರ್ನಲ್ಲಿ 2ನೇ ಆರೋಪಿಯಾಗಿರುವ ಬಿ.ಎಂ.ಪಾರ್ವತಿ ಲೋಕಾಯುಕ್ತ ನೋಟಿಸ್ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದರು.
ಗುರುವಾರವಷ್ಟೇ (ಅ.24) ಪಾರ್ವತಿ ಅವರಿಗೆ ಲೋಕಾಯುಕ್ತ ಎಸ್ಪಿ ಉದೇಶ್ ನೋಟಿಸ್ ಜಾರಿ ಮಾಡಿದ್ದರು. ಶುಕ್ರವಾರ ಮೈಸೂರಿನ ಗೌಪ್ತ ಸ್ಥಳದಲ್ಲಿ ವಿಚಾರಣೆ ನಡೆಸಲಾಗಿದೆ. ಇದು ಚರ್ಚೆಗೂ ಗ್ರಾಸವಾಗಿದೆ.
ಏಕೆಂದರೆ, ತನಿಖಾಧಿಕಾರಿ ಬಿಟ್ಟು ಲೋಕಾಯುಕ್ತ ಕಚೇರಿಯ ಯಾವ ಅಧಿಕಾರಿಗಳಿಗೂ ಪಾರ್ವತಿ ಅವರು ವಿಚಾರಣೆಗೆ ಬರುವ ಮಾಹಿತಿ ತಿಳಿದಿರಲಿಲ್ಲ ಎಂದು ಹೇಳಲಾಗಿದೆ. ಪಾರ್ವತಿ ಅವರ ವಿಚಾರದಲ್ಲಿ ಏಕೆ ಇಷ್ಟು ಗೌಪ್ಯತೆ ಎಂಬ ಪ್ರಶ್ನೆಯೂ ಎದ್ದಿದೆ. ಜೊತೆಗೆ ಪಾರ್ವತಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಗೌಪ್ಯತೆಗೆ ಕಾಯ್ದುಕೊಳ್ಳುವಂತೆ ಲೋಕಾಯುಕ್ತ ಅಧಿಕಾರಿಗೆ ನಿರ್ದೇಶನ ಇತ್ತಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಇದಕ್ಕೂ ಮುನ್ನಾದಿನ 2004ರಲ್ಲಿ ಮೈಸೂರಿನ ಹೆಚ್ಚುವರಿ ಡಿಸಿ ಆಗಿದ್ದ ಪಾಲಯ್ಯರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. 2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್.ಬಚ್ಚೇಗೌಡ ಹಾಗೂ ಅಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿದ್ದ ಸುಬ್ರಹ್ಮಣ್ಯರಾವ್‌ರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.
ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸಿಎಂ ಮೇಲ್ಮನವಿ:
ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿಸಿ ರಾಜ್ಯಪಾಲರು ನೀಡಿರುವ ಆದೇಶ ಎತ್ತಿಹಿಡಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ವಿಭಾಗೀಯ ಪೀಠದದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಏಕಸದಸ್ಯ ಪೀಠ ಆದೇಶ ನೀಡಿದ ಬರೋಬ್ಬರಿ 1 ತಿಂಗಳ ನಂತರ, ಸಾಕಷ್ಟು ಅಳೆದುತೂಗಿ ಸಿದ್ದರಾಮಯ್ಯ ಕಾನೂನಾತ್ಮಕವಾಗಿ ಮುಂದಡಿ ಇಟ್ಟಿದ್ದಾರೆ. ಈ ಅರ್ಜಿ ವಿಚಾರಣೆ ದಿನಾಂಕ ಇನ್ನಷ್ಟೇ ನಿಗದಿ ಆಗಬೇಕಿದೆ.
ಇದೇ ವೇಳೆ, ಮುಡಾ ಕೇಸ್ ತನಿಖೆ ಜೋರಾಗಿದೆ. ಇತ್ತೀಚೆಗಷ್ಟೇ ಮುಡಾ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದ ಇಡಿ ಈಗ ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ತಹಶೀಲ್ದಾರ್ ರಾಜಶೇಖರ್ ಸೇರಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಕೊಟ್ಟಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.