ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ೨,೫೦೦ ಕೋಟಿಗೂ ಹೆಚ್ಚು ಭೂಹಗರಣ ನಡೆದಿದೆ. ಈ ಹಗರಣವನ್ನು ಮುಚ್ಚಿಹಾಕಲು ಸಚಿವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಹಾಗಾಗಿ ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಮೈಸೂರು ನಗರ ಬಿಜೆಪಿ ಶಾಸಕ ಶ್ರೀವತ್ಸ ಒತ್ತಾಯಿಸಿದ್ದಾರೆ.
ಮೈಸೂರಲ್ಲಿ ಇಂದು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಂದರೆ ಮುಡಾದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಾನು ಬೆಂಗಳೂರಿನ ನಗರಾಭಿವೃದ್ಧಿ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದೆ. ದೂರಿನನ್ವಯ ನಗರಾಭಿವೃದ್ಧಿ ಕಾರ್ಯದರ್ಶಿಗಳು ಮುಡಾಕ್ಕೆ ತನಿಖಾಧಿಕಾರಿಗಳನ್ನ ಕಳುಹಿಸಿ ಪರಿಶೀಲನೆ ನಡೆಸಿ ೧೪೦ಕ್ಕೂ ಹೆಚ್ಚು ಕಡತಗಳನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದಾರೆ ಎಂದರು.
ಮುಡಾದಲ್ಲಿ ಸೈಟ್ ಹಂಚಿಕೆ ಸೇರಿದಂತೆ ಇತರ ಎಲ್ಲಾ ಕಡೆ ಅವ್ಯವಹಾರ ನಡೆದಿದ್ದು, ಕಳೆದ ೪ ವರ್ಷಗಳಲ್ಲಿ ೫೦:೫೦ ಸೈಟು ಹಂಚಿಕೆ ಅವ್ಯವಹಾರದಲ್ಲಿ ೨,೫೦೦ ಕೋಟಿಗೂ ಹೆಚ್ಚು ಅವ್ಯವಹಾರ ಆಗಿದೆ. ಇದನ್ನು ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ನೀಡಬೇಕು. ಮೈಸೂರು ಮುಡಾದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರಿಗೆ ದಾಖಲಾತಿ ನೀಡುತ್ತೇನೆ. ಈ ಸಂಬಂಧ ವಿಧಾನಸೌಧದ ಒಳಗೂ ಮತ್ತು ಹೊರಗೂ ಪ್ರತಿಭಟನೆ, ಹೋರಾಟ ನಡೆಸುತ್ತೇವೆ ಎಂದು ಶಾಸಕರು ತಿಳಿಸಿದರು.