ಬೆಂಗಳೂರು: ಮುಡಾ ಅಕ್ರಮ ಕರ್ನಾಟಕ ಕಂಡ ದೊಡ್ಡ ಹಗರಣ. ಇದರಲ್ಲಿ ಸಿಎಂ ಮತ್ತು ಅವರ ಕುಟುಂಬ ಶಾಮೀಲಾಗಿದೆ. ಹೀಗಾಗಿ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಕೇವಲ 14 ಸೈಟ್ ಗಳಷ್ಟೆ ಅಲ್ಲ ಬಡವರ ಸೈಟ್ ಲೂಟಿಯಾಗಿದೆ. ಮುಡಾದಲ್ಲಿ 2 ರಿಂದ 4 ಸಾವಿರ ಕೋಟಿ ಅಕ್ರಮ ಆಗಿದೆ. ಐಎಎಸ್ ಅಧಿಕಾರಿಗಳು ದಾಖಲೆಗಳಿಗೆ ವೈಟ್ನರ್ ಹಾಕುತ್ತಾರೆ. ದಾಖಲೆ ಮಾಯ ಮಾಡುತ್ತಾರೆ. ಹೀಗಾಗಿ ಸಿಬಿಐ ತನಿಖೆ ಆದರೆ ಮತ್ತಷ್ಟು ಹಗರಣ ಹೊರಬರುತ್ತೆ. ಐಎಎಸ್ ಅಧಿಕಾರಿ ಫೈಲ್ ತೆಗೆದುಕೊಂಡು ಹೋಗಿರುವುದು ದಿಗ್ಭ್ರಮೆ ಮೂಡಿಸಿದೆ. ಇನ್ನು ಸಚಿವ ಭೈರತಿ ಸುರೇಶ್ ಎಷ್ಟು ಫೈಲ್ ತೆಗೆದುಕೊಂಡು ಹೋಗಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಆಡಳಿತ ಯಾವ ಮಟ್ಟಕ್ಕೆ ಬಂದಿದೆ ಅಂತಾ ನೋಡಿ ಮುಡಾ ಅಕ್ರಮ ರಕ್ಷಣೆಗೆ ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ. ಈ ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.