ಬೆಂಗಳೂರು: ಮೈಸೂರಿನ ಮುಡಾದಿಂದ ಮುಖ್ಯಮಂತ್ರಿಗಳ ಧರ್ಮಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು. ಡಿನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆಯೇ ಆಗಿಲ್ಲ. ಸತ್ತವರ ಹೆಸರಿನಲ್ಲಿ ಜಮೀನು ಡಿ ನೋಟಿಫಿಕೇಷನ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಭಾಮೈದ ಖರೀದಿ ಮಾಡಿರುವ ಮೈಸೂರಿನ ಕೆಸರೆ ಬಳಿಯ ಜಮೀನಿಗೆ ಮುಡಾ ಭೂಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. ಈಗಿರುವಾಗ ಇದು ಖಂಡಿತವಾಗಿಯೂ ಮುಡಾಗೆ ಸೇರಿದ ಜಮೀನು ಆಗುತ್ತದೆ. ಈ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿ ಖರೀದಿಸಲಾಗಿದೆ. ಇದು ಕಾನೂನುಬಾಹಿರ ಎಂದು ಕೇಂದ್ರ ಸಚಿವರು ದೂರಿದರು.
ಇದೇ ವೇಳೆ ಕೇಂದ್ರ ಸಚಿವರು ಮಾಧ್ಯಮಗಳ ಮುಂದೆ ಹಗರಣಕ್ಕೆ ಸಂಬಂಧಿಸಿದ ಕೆಲ ಮಹತ್ವದ ದಾಖಲೆಗಳನ್ನು ಪ್ರದರ್ಶಿಸಿದರು.
ಸಿಎಂ ಸಿದ್ಧರಾಮಯ್ಯ ಅವರ ಧರ್ಮಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಎಂದು ತೋರಿಸುತ್ತಾರೆ. ಆದರೆ, ಆ ಜಾಗ ಭೂ ಪರಿವರ್ತನೆ ಆಗಿತ್ತು. ಜಮೀನಿನ ಹಿನ್ನಲೆಯನ್ನು ಯಾರೂ ಪರಿಶೀಲಿಸಲಿಲ್ಲ ಏಕೆ? ಭೂಮಿ ಬದಲಾವಣೆಯಾದಾಗ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದರು.
ಈ ಜಮೀನಿನ ಮೂಲದಾರರು ಲಿಂಗ ಆಲಿಯಾಸ್ ಜವರ ಎಂದಿದೆ. ಈ ಜಮೀನನ್ನು ೧೯೯೨ರಲ್ಲಿ ಮುಡಾ ತನ್ನ ವಶಕ್ಕೆ ಪಡೆಯುವ ನೋಟಿಫಿಕೇಷನ್ ಹೊರಡಿಸಿತ್ತು. ೧೯೯೫ರಲ್ಲಿ ಜಮೀನಿನ ಅಂತಿಮ ಭೂಸ್ವಾಧೀನದ ನೋಟಿಫಿಕೇಷನ್ ಆಗಿದೆ. ಆಗ ೩ ಎಕರೆ ೧೬ ಗುಂಟಗೆ ೧೯೯೨ ರಲ್ಲೇ ಈ ಜಮೀನಿಗೆ ಮುಡಾದಿಂದ ಕೋರ್ಟ್‌ಗೆ ಹಣ ಸಂದಾಯ ಆಗಿದೆ. ಜಮೀನಿನ ಪೋತಿಯೂ ಆಗಿದೆ. ಆದರೂ ೧೯೯೮ರಲ್ಲಿ ಲಿಂಗನ ಹೆಸರು ಬರುತ್ತದೆ. ಡಿ ನೋಟಿಫಿಕೇಷನ್ ಆಗುತ್ತದೆ. ಈ ಜಮೀನು ಡಿ ನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು ಎಂದು ಮಾಹಿತಿ ನೀಡಿದರು ಕೇಂದ್ರ ಸಚಿವರು.
೧೯೮೮ರಲ್ಲಿ ಲಿಂಗ ಅಲಿಯಾಸ್ ಜವರ ಹೆಸರಿನಲ್ಲಿ ಡಿ ನೋಟಿಫಿಕೇಷನ್ ಆಗಿದೆ. ೨೦೦೪ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುತ್ತಾರೆ. ೨೦೦೫ರಲ್ಲಿ ಮಲ್ಲಿಕಾರ್ಜುನಸ್ವಾಮಿ ಭೂಮಿ ಬದಲಾವಣೆಗೆ ಅರ್ಜಿ ಸಲ್ಲಿಸುತ್ತಾರೆ. ಆಗ ಸಿದ್ಧರಾಮಯ್ಯನವರೇ ಉಪ ಮುಖ್ಯಮಂತ್ರಿ ಆಗಿದ್ದರು. ಭೂಮಿ ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು. ಜಮೀನಿನ ಹಿನ್ನಲೆ ಪರಿಶೀಲಿಸಲಿಲ್ಲವೆ ಏಕೆ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
೬೨ ಕೋಟಿ ಯಾರಪ್ಪನ ಆಸ್ತಿ; ಮುಡಾದಿಂದ ತಮಗೆ ೬೨ ಕೋಟಿ ಪರಿಹಾರ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಯಾರಪ್ಪನ ಆಸ್ತಿ ಎಂದು ೬೨ ಕೋಟಿ ಕೊಡಬೇಕು. ಇದು ಪಿತಾರ್ಜಿತ ಆಸ್ತಿನಾ ಯಾರ ಬಳಿ ಖರೀದಿ ಮಾಡಿದ್ದಾರೆ ಎಲ್ಲವೂ ಗೊತ್ತಿದೆ, ನನ್ನ ಬಳಿ ಎಲ್ಲ ದಾಖಲೆ ಇದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದ ಕುಮಾರಸ್ವಾಮಿ ಅವರು, ಇದು ಹಿಟ್ ಅಂಡ್ ರನ್ ಅಲ್ಲ. ದಾಖಲೆ ಸಮೇತ ಮಾಹಿತಿ ಕೊಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.