ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗೆ ಅರ್ಹತೆಗೂ ಮೀರಿ ಎರಡು ಕೋಟಿ ರೂ. ಬೆಲೆಬಾಳುವ ೧೪ ಜಮೀನುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪ ಮಾಡಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಹತೆ ಪ್ರಕಾರ ಪಾರ್ವತಿ ಅವರಿಗೆ ನೀಡಬೇಕಾಗಿದ್ದು ಕೇವಲ ಎರಡು ಜಮೀನು ಮಾತ್ರ. ಆದರೆ ೧೪ ಜಮೀನುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು. ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮೂಡಾ) ಅವ್ಯವಹಾರಕ್ಕೆ ಸಂಬಂಧಿಸಿ ಬಿಜೆಪಿ ವತಿಯಿಂದ ಇದೇ ೧೨ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದರು.
ಮುಖ್ಯಮಂತ್ರಿಗಳು ಬಡವರ ಬಗ್ಗೆ ಮೊಸಳೆಕಣ್ಣೀರು ಹಾಕುತ್ತಿದ್ದಾರೆ. ಬಡವರಿಗೆ ನಿವೇಶನ ಹಂಚಬೇಕು. ಈಗಾಗಲೇ ನಡೆದ ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕು. ಸಿಎಂ, ಅವರ ಪತ್ನಿ ಮೇಲೆ ಆರೋಪ ಇರುವ ಕಾರಣ ಮತ್ತೊಂದು ಎಸ್‌ಐಟಿ ಮಾಡಿ ತನಿಖೆ ನಡೆಸುವುದು ಸೂಕ್ತವಲ್ಲ, ಈ ಭಾರಿ ಮೊತ್ತದ ಹಗರಣದ ತನಿಖೆಯನ್ನು ತಕ್ಷಣವೇ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.
ಶಾಸಕರು, ಸಿಎಂ ಪರಮಾಪ್ತರು ನಿನ್ನೆ ಪ್ರೆಸ್ ಮೀಟ್ ಮಾಡಿದ್ದಾರೆ. ೯೨ರಲ್ಲಿ ಭೂ ವಶಕ್ಕೆ ಪಡೆಯುವ ಕೆಲಸ ಶುರುವಾಗಿದೆ. ೨೦೦೪ರಲ್ಲಿ ಪಾರ್ವತಮ್ಮ ಅವರ ಅಣ್ಣ ಜಮೀನು ಖರೀದಿಸಿದ್ದಾರೆ. ಮೂಡಾ ಸ್ವಾಧೀನದಲ್ಲಿದ್ದ ಜಾಗವನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿಸಿದ್ದು ಹೇಗೆ? 2009- 10ರಲ್ಲಿ ಗಿಫ್ಟ್ ಡೀಡ್ ಆಗಲೂ ಸಹ ಈ ಜಾಗವು ಮೂಡಾ ಆರ್‌ಟಿಸಿಯಲ್ಲಿ ನಮೂದಾಗಿತ್ತು. ಭೂಮಿ ಖರೀದಿ ಆಗಿ ಕನ್ವರ್ಷನ್ ಆಗಿದೆ. ಗಿಫ್ಟ್ ಡೀಡ್ ಎಂದು ಮಾಹಿತಿ ಕೊಡುವಾಗಲೂ ಅದು ಕೃಷಿ ಭೂಮಿ ಆಗಿರಲಿಲ್ಲ.
ಮೈಸೂರಿನದು ಲ್ಯಾಂಡ್ ಸ್ಕ್ಯಾಮ್; ಮೂಡಾ ಪ್ರಾಧಿಕಾರದ ಭೂಮಿ ಸಂಬಂಧ ದೊಡ್ಡ ಹಗರಣ ಅಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಅನೇಕ ತಪ್ಪು ಮಾಹಿತಿ ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ಮುಖವಾಡ ಕಳಚಿಬಿದ್ದಿದೆ. ಹೇಗಾದರೂ ಬೆಲೆಬಾಳುವ ನಿವೇಶನ ಕಬಳಿಸಬೇಕು ಎಂದುಕೊಂಡು ನಿಯಮ ಗಾಳಿಗೆ ತೂರಿ ಅಕ್ರಮ ನಡೆಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು. ಈ ಹಗರಣಕ್ಕೆ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.
ಮಹದೇವಪ್ಪನವರೇ ನಿನ್ನ ಹೆಂಡತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಎಂದ ಸಿಎಂ, ಬಡ ಹೆಣ್ಮಕ್ಕಳಿಗೆ ೨ ಸಾವಿರ ಕೊಟ್ಟರೆ, ತಮ್ಮ ಪತ್ನಿಗೆ ೨ ಕೋಟಿಗೂ ಹೆಚ್ಚು ಮೌಲ್ಯದ ೧೪ ನಿವೇಶನಗಳನ್ನು ಪಡೆದಿದ್ದಾರೆ. ೬೩-೬೪ ಕೋಟಿಗೂ ಹೆಚ್ಚು ಬೆಲೆಯ ನಿವೇಶನ ಪಡೆದುದನ್ನು ರಾಜ್ಯದ ಜನರೂ ಪ್ರಶ್ನೆ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
೧೮ ಕೋಟಿಯ ನಿವೇಶನ ಲಭಿಸಿದೆ. ಆದರೆ, ೬೨ ಕೋಟಿ ಮೌಲ್ಯದ ನಿವೇಶನಗಳು ಸಿಗಬೇಕಿತ್ತು ಎಂದು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಮೂಡಾ ಹಗರಣದಲ್ಲಿ ೨ ಪ್ರಕರಣಗಳಿವೆ. ಸಿಎಂ ಧರ್ಮಪತ್ನಿಗೆ ಕೊಟ್ಟ ೧೪ ನಿವೇಶನಗಳದು ಒಂದು ಪ್ರಕರಣ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಓಡೋಡಿ ತರಾತುರಿಯಲ್ಲಿ ಮೈಸೂರಿಗೆ ಹೋಗಿ ಮೂಡಾ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆಯಲ್ಲಿ ಮಾಹಿತಿ ಪಡೆದು ಎಲ್ಲ ಅಧಿಕಾರಿಗಳನ್ನೂ ಏಕಾಏಕಿ ವರ್ಗಾವಣೆ ಮಾಡಿದ್ದಾರೆ ಎಂದು ಟೀಕಿಸಿದರು.
ಮೂಡಾ ಅವ್ಯವಹಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ವರದಿ ಬಳಿಕವೂ ೧೫-೬-೨೦೨೪ರಲ್ಲಿ ೪೨ ನಿವೇಶನಗಳನ್ನು ಒಬ್ಬರಿಗೆ ಬದಲಿಯಾಗಿ ಕೊಟ್ಟಿದ್ದಾರೆ. ಇಂತಹ ಸಾವಿರಾರು ನಿವೇಶನಗಳನ್ನು ಈ ಸರಕಾರ ಕಾನೂನುಬಾಹಿರವಾಗಿ ಕೊಟ್ಟಿದೆ. ಬಡವರು, ದಲಿತರು, ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ನಿವೇಶನಗಳನ್ನು ತಮಗೆ ಬೇಕಾದಂತೆ ಹಂಚಿದ್ದಾರೆ. ತನಿಖೆ ನಡೆಸಿದ ಮುಖ್ಯಮಂತ್ರಿಗಳು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.