ಮೈಸೂರು: ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. ಮುಡಾ ಹಗರಣ ಸಂಬಂಧ ಇತ್ತೀಚೆಗೆ ಮಾತನಾಡಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪದೇ ಪದೇ ಲೋಕಾಯುಕ್ತ ಕಚೇರಿಗೆ ಭೇಟಿ ನೀಡುತ್ತಿದ್ದು ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ನಡುವೆ ಇದೀಗ ಸ್ನೇಹಮಯಿ ಕೃಷ್ಣ ವಿರುದ್ದ ಎಂ ಲಕ್ಷ್ಮಣ್ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಎಂ.ಲಕ್ಷ್ಮಣ್ ಗೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮಣ, ನಾನು ಲೋಕಾಯುಕ್ತ ಅಧಿಕಾರಿಯ ಮುಖವನ್ನೇ ನೋಡಿಲ್ಲ. ಲೋಕಾಯುಕ್ತ ಅಧಿಕಾರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಹೀಗಿದ್ದರೂ ಲೋಕಾಯುಕ್ತ ಅಧಿಕಾರಿಗಳಿಗೆ ಲಕ್ಷ್ಮಣ ಒತ್ತಡ ಹಾಕುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ಧವೇ ಅನೇಕ ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ನಾವು ಅವನ ವಿರುದ್ಧವೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ ದಿನ ಬೆಳಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಮುಡಾ ಸಂಪೂರ್ಣ ಸ್ವಚ್ಛ ಆಗಬೇಕು. ನಮಗಿರುವ ಮಾಹಿತಿ ಪ್ರಕಾರ ಸಿಎಂ ಒಳ್ಳೆ ಅಧಿಕಾರಿಯನ್ನ ನೇಮಕ ಮಾಡುತ್ತಾರೆ. ಮುಡಾ ಶುದ್ದಿಕರಣ ಮಾಡುವ ಕೆಲಸ ಆಗುತ್ತದೆ ಎಂದರು.