ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಒಕ್ಕೂಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲಟ್ ಅವರಿಗೆ ಪತ್ರ ಬರೆದಿದೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಕೇಳಿಬಂದಿದ್ದು ಸಿಎಂ ಪತ್ನಿ ಹೆಸರಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ಪ್ರತಿಭಟನೆ ಆರಂಭಿಸಿದ್ದು, ಸಿಎಂ ರಾಜೀನಾಮೆಗೆ ಆಗ್ರಹಿಸಿದೆ. ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿದೆ. ಇದರ ಬೆನ್ನಲ್ಲೇ ಕಬ್ಬು ಬೆಳೆಗಾರರ ಒಕ್ಕೂಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದೆ.
ಮುಡಾ ಸಮಿತಿಯು ಭೂಗಳ್ಳರಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳು ಮತ್ತು ಉಪ-ಕಾನೂನನ್ನು ರೂಪಿಸಿದ್ದು, ದೀರ್ಘಾವಧಿಯಿಂದ ಕಾಯುತ್ತಿರುವ ಪ್ರಾಮಾಣಿಕ ಅರ್ಜಿದಾರರಿಗೆ ಅಥವಾ ಭೂಮಿ ಕಳೆದುಕೊಂಡಿರುವ ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ಮುಡಾವು ಕಾನೂನು ಪ್ರಕಾರ ರೈತರು ಮತ್ತು ಇತರ ಭೂಮಾಲೀಕರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿತ್ತು. ಮತ್ತು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆ ಮತ್ತು ನಿಯಮಗಳಲ್ಲಿ ನಿಗದಿಪಡಿಸಿದಂತೆ ಅವರಿಗೆ ಪರಿಹಾರವನ್ನು ನೀಡಬೇಕಾಗಿತ್ತು. ಆದರೆ ಇವರು ಹಾಗೇ ಮಾಡಿಲ್ಲ.
ತನಿಖೆಯನ್ನು ಘೋಷಿಸುವಾಗ ಸರ್ಕಾರವು ಅಪ್ರಾಮಾಣಿಕ ಮುಡಾ ಆಯುಕ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಸರಳವಾಗಿ ವರ್ಗಾವಣೆ ಮಾಡಿದೆ. ಈ ಹಗರಣದಲ್ಲಿ ಕರ್ನಾಟಕ ಸರ್ಕಾರದ ಆಡಳಿತ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರ ಬಗ್ಗೆ ಅನುಮಾನಗಳಿವೆ ಮತ್ತು ಹಲವಾರು ರಾಜಕೀಯ ನಾಯಕರು ಮತ್ತು ಪ್ರಭಾವಿತ ಉದ್ಯಮಿ ಈ ಹಗರಣದ ಫಲಾನುಭವಿಯಾಗಿರುವ ಬಲವಾದ ಸೂಚನೆಗಳಿವೆ.
ಹಾಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿರುವ ಆರೋಪದ ಅಕ್ರಮಗಳ ಕುರಿತು ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕಬ್ಬು ಬೆಳಗಾರರ ಸಂಘ ಮನವಿ ಮಾಡುತ್ತಿದೆ.