Friday, April 11, 2025
Google search engine

Homeರಾಜ್ಯಮುಡಾ ಹಗರಣ: ದೂರರ್ಜಿ ನೀಡಿದರೂ ಕ್ರಮಕೈಗೊಳ್ಳದಕ್ಕೆ ಪೊಲೀಸ್​ ಆಯುಕ್ತರಿಗೆ ಸ್ನೇಹಮಯಿ ಕೃಷ್ಣ ಪತ್ರ

ಮುಡಾ ಹಗರಣ: ದೂರರ್ಜಿ ನೀಡಿದರೂ ಕ್ರಮಕೈಗೊಳ್ಳದಕ್ಕೆ ಪೊಲೀಸ್​ ಆಯುಕ್ತರಿಗೆ ಸ್ನೇಹಮಯಿ ಕೃಷ್ಣ ಪತ್ರ

ಮೈಸೂರು: ಮುಡಾ ಬದಲಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಕಾಂಗ್ರೆಸ್​ ನಾಯಕ ಎಂ. ಲಕ್ಷ್ಮಣ ಅವರ ವಿರುದ್ಧ ದೂರು ನೀಡಿ ಆರು ದಿನ ಕಳೆದರೂ ಇನ್ನೂ ಕ್ರಮ ಏಕೆ ಕೈಗೊಂಡಿಲ್ಲ ಅಂತ ಪ್ರಶ್ನಿಸಿ ಆರ್​​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರು ಪೊಲೀಸ್​ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ದೂರು ನೀಡಿ ಆರು ದಿನವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮಂಗಳವಾರ ಮೈಸೂರಿಗೆ ಬರುತ್ತಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿ ಆರ್​​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ

“ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಂಡತಿ ಶ್ರೀಮತಿ ಪಾರ್ವತಿ ಮತ್ತು ಲಕ್ಷ್ಮಣ್​ರವರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರರ್ಜಿ ನೀಡಿರುವುದು ನಿಮಗೆ ತಿಳಿದ ವಿಷಯ. ದೂರರ್ಜಿ ‌ನೀಡಿ ಆರು ದಿನಗಳಾಗುತ್ತಾ ಬಂದಿದ್ದರೂ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬಂದಿರುವುದಿಲ್ಲ. ನಿನ್ನೆ ರಾತ್ರಿ ಪಾರ್ವತಿರವರು ಮೈಸೂರಿಗೆ ಬಂದಿದ್ದು, ಇಂದು ಬೆಳಗ್ಗೆ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಲಿದ್ದಾರೆ ಎಂಬುದು ತಿಳಿದುಬಂದಿದೆ. ಆದ್ದರಿಂದ ಆರೋಪಿತರಾದ ಪಾರ್ವತಿರವರನ್ನು ಈ ದಿನ ತಾವೇ ಖುದ್ದಾಗಿ ನನ್ನ ಆರೋಪಕ್ಕೆ ಪೂರಕವಾಗಿ ವಿಚಾರಣೆಗೆ ಒಳಪಡಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.”

“ಏಕೆಂದರೆ ಪಾರ್ವತಿರವರು ಮುಖ್ಯಮಂತ್ರಿಗಳ ಹೆಂಡತಿಯಾಗಿರುವುದರಿಂದ ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸ್ ನಿರೀಕ್ಷಕರು ಮತ್ತು ಸಹಾಯಕ ಪೊಲೀಸ್ ಆಯುಕ್ತರು ಹಿಂಜರಿಯುವ ಸಾಧ್ಯತೆ ಇರುವುದರಿಂದ ತಾವೇ ವಿಚಾರಣೆ ನಡೆಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಮನವಿ ಮಾಡಿದ್ದಾರೆ.

ಸ್ನೇಹಮಯಿ ಕೃಷ್ಣರವರು ಸಿಎಂ ಪತ್ನಿ ಪಾರ್ವತಿ ಅವರಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದಾರೆ.

1) ನಿಮ್ಮ ಯಜಮಾನರು (ಸಿದ್ದರಾಮಯ್ಯ) ಎಕ್ಸ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಕಂಡು ಬರುವ ನಿಮ್ಮ ಸಹಿಗೂ, ಈ ಹಿಂದೆ “ಪ್ರಾಧಿಕಾರ” ಕ್ಕೆ ನೀಡಿರುವ ಪತ್ರದಲ್ಲಿನ ನಿಮ್ಮ ಸಹಿಗೂ ವ್ಯತ್ಯಾಸಗಳು ಇರಲು ಕಾರಣವೇನು? ಸಹಿಯನ್ನು ನಿಜವಾಗಿಯೂ ನೀವು ಮಾಡಿರುತ್ತೀರಾ? ಅಥವಾ ನಿಮ್ಮ ಪರವಾಗಿ ಯಾರಾದರೂ ಮಾಡಿದ್ದಾರೆಯೆ?
2) ಸಹಿಯನ್ನು ನೀವೆ ಮಾಡಿದ್ದರೆ ಯಾವಾಗಾ? ಎಲ್ಲಿ ಮಾಡಿದ್ದೀರಾ? ಬೇರೆಯವರು ಸಹಿ ಮಾಡಿದ್ದಾರೆ ಅನ್ನುವುದಾದರೆ ನಿಮ್ಮ ಸಹಿಯನ್ನು ನಕಲು ಮಾಡಿರುವವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡುತ್ತೀರಾ?
3) ಲಕ್ಷ್ಮಣ್ ರವರು ಇತ್ತೀಚೆಗೆ ನಿಮ್ಮನ್ನು ಭೇಟಿ ಮಾಡಿದ್ದರೆ? ಯಾವಾಗ, ಯಾವ ಸ್ಥಳದಲ್ಲಿ, ಯಾವ ಕಾರಣಕ್ಕಾಗಿ ಭೇಟಿ ಮಾಡಿದ್ದರು? 23.06. 2014ರಂದು ಪ್ರಾಧಿಕಾರಕ್ಕೆ ನೀವು ನೀಡಿರುವ ಪತ್ರದ ಎರಡನೇ ಪುಟದಲ್ಲಿ ಕೆಲವು ಪದಗಳಿಗೆ ವೈಟ್ನರ್ ಹಾಕಲು ಕಾರಣವೇನು?
4) ವೈಟ್ನರ್ ಅನ್ನು ನೀವು ಹಾಕಿದ್ದೀರಾ ? ಅಥವಾ ಬೇರೆಯವರು ಹಾಕಿದ್ದಾರಾ? ನಿಮ್ಮ ಪ್ರಕಾರ ವೈಟ್ನರ್ ಹಾಕಿರುವ ಸ್ಥಳದಲ್ಲಿ ಯಾವ ವಿಚಾರ ತಿಳಿಸಲಾಗಿತ್ತು? ಎಂದು ಪ್ರಶ್ನೆ ಕೇಳಿದ್ದಾರೆ.

ಈ ಪ್ರಶ್ನೆಗಳಿಗೆ ವಿಚಾರಣೆ ಸಂದರ್ಭದಲ್ಲಿ ಸೂಕ್ತ ಉತ್ತರ (ಹೇಳಿಕೆ) ಪಡೆದು ಸತ್ಯಾಸತ್ಯತೆ ತಿಳಿದುಕೊಂಡು, ಅವರ ಮಾದರಿ ಸಹಿಗಳನ್ನು ಪಡೆದುಕೊಂಡು ಅವರ ಹೇಳಿಕೆ ಮತ್ತು ಮಾದರಿ ಸಹಿಗಳನ್ನು ತನಿಖಾಧಿಕಾರಿಗೆ ನೀಡಿ. ಕೂಡಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ತನಿಖಾಧಿಕಾರಿಗೆ ಸೂಕ್ತ ಸೂಚನೆ ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರಿಗೆ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular