ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದಂತ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಆದೇಶವನ್ನು ಎತ್ತಿ ಹಿಡಿದಿದಿದ್ದು, ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ ಮಾಡಿದೆ. ಈ ಮೂಲಕ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್ ನೀಡಿದೆ.
ಇಂದು ಮಂಗಳವಾರ ಹೈಕೋರ್ಟ್‌ನಲ್ಲಿ ಮುಡಾಹಗರಣ ಸಂಬಂಧ ತೀರ್ಪು ಪ್ರಕಟಿಸಿರುವ ನ್ಯಾಯಮೂರ್ತಿಗಳು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ನೀಡಿರುವ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಎತ್ತಿ ಹಿಡಿದಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯಗೆ ಬಹುದೊಡ್ಡ ಸಂಕಷ್ಟ ಎದುರಾಗಿದೆ.
ಸಿಎಂ ಸಿದ್ಧರಾಮಯ್ಯ ವಿರುದ್ಧ ಮುಡಾ ಹಗರಣದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದರು. ರಾಜ್ಯಪಾಲರು ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ಧರಾಮಯ್ಯ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ್ದಂತ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಹೈಕೋರ್ಟ್ ಹೇಳಿದ್ದೇನು?
ಸಿಎಂ ವಿರುದ್ಧ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಸಂವಿಧಾನದ ವಿಧಿ ‘17 ಎ’ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ‘17 ಎ’ ಅಡಿಯ ಆದೇಶ ಸಮರ್ಪಕವಾಗಿದೆ ಎಂದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿದರು.
ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ 6 ದಿನಗಳ ಸುದೀರ್ಘ ವಾದ ಮಂಡನೆ ಆಲಿಸಿತ್ತು. ಸಿಎಂ ಸಿದ್ದರಾಮಯ್ಯ ಪರ ವಕೀಲರು, ಸಾಲಿಸಿಟರ್ ಜನರಲ್ ಹಾಗೂ ದೂರುದಾರರ ಪರ ವಕೀಲರು ಸುದೀರ್ಘ ವಾದ ಮಂಡನೆ ಮಾಡಿದ್ದರು.
ಸಿದ್ದರಾಮಯ್ಯ ಪರ ವಕೀಲರ ವಾದ ಏನಿತ್ತು?
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರವೇನಿತ್ತೆಂಬುದನ್ನು ರಾಜ್ಯಪಾಲರು ತಿಳಿಸಿಲ್ಲ ಎಂದು ಸಿಎಂ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಯಾವುದಾದರೂ ಕಡತಕ್ಕೆ ಸಿಎಂ ಸಹಿ ಹಾಕಿದ್ದಾರೆಯೇ ಎಂದು ಹೇಳಿಲ್ಲ. ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ವಿಶೇಷ ಸಂದರ್ಭದಲ್ಲಷ್ಟೇ ಬಳಸಬೇಕು. ಹಾಗೆ ಬಳಸಿದಾಗ ಅದಕ್ಕೆ ಕಾರಣಗಳನ್ನು ನೀಡಬೇಕು. ಆದರೆ ಪ್ರಕ್ರಿಯೆ ಪಾಲಿಸದೇ ತರಾತುರಿಯಲ್ಲಿ ಆದೇಶ ನೀಡಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅನುಮತಿ ನೀಡಬಹುದೇ ಹೊರತು, ಖಾಸಗಿ ವ್ಯಕ್ತಿಗಳಿಗೆ ನೀಡುವಂತಿಲ್ಲ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ಒಪ್ಪಬೇಕಿತ್ತು. ಏಕೆ ಒಪ್ಪಿಲ್ಲವೆಂಬುದಕ್ಕೆ ರಾಜ್ಯಪಾಲರು ಸೂಕ್ತ ಕಾರಣ ನೀಡಿಲ್ಲ.
ಬಿಜೆಪಿ, ಜೆಡಿಎಸ್ ನಾಯಕ ವಿರುದ್ಧದ ದೂರಿಗೆ ಅನುಮತಿ ನೀಡದೇ ಸಿದ್ದರಾಮಯ್ಯ ವಿರುದ್ಧ ಮಾತ್ರ ಅನುಮತಿ ನೀಡಿ ತಾರತಮ್ಯ ನೀತಿ ಅನುಸರಿಸಿದ್ದಾರೆ. ದೂರುದಾರರ ಹಿನ್ನೆಲೆ ಪರಿಗಣಿಸದೇ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಕಾನೂನುಬಾಹಿರ. ವಿಪಕ್ಷಗಳ ಸರ್ಕಾರಗಳನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲಾಗುತ್ತಿದೆ. ಹೀಗೆಂದು ಸಿಎಂ ಪರ ವಕೀಲರಾದ ಅಬಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡಿದ್ದರು.
ಸಿಎಂ ಪರ ವಕೀಲರ ವಾದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು. ರಾಜ್ಯಪಾಲರು ಮೇಲ್ನೋಟಕ್ಕೆ ಅಪರಾಧದ ಅಂಶಗಳಿವೆಯೇ ಎಂಬುದನ್ನಷ್ಟೇ ಸೆಕ್ಷನ್ 17 ಎ ಅಡಿಯಲ್ಲಿ ನೋಡಬೇಕು. ರಾಜ್ಯಪಾಲರು ತೀರ್ಪು ನೀಡಿಲ್ಲ ಮತ್ತು ನೀಡುತ್ತಿಲ್ಲ. ತನಿಖೆಗೆ ಅನುಮತಿಯಷ್ಟೇ ನೀಡುತ್ತಿದ್ದಾರೆ. ಹೀಗಾಗಿ ಅವರು ವಿವರವಾದ ಕಾರಣಗಳನ್ನು ಕೊಡಬೇಕಿಲ್ಲ. ಕೊಟ್ಟರೆ ತನಿಖಾಧಿಕಾರಿ ಮೇಲೆ ಪ್ರಭಾವ ಬೀರಿದಂತೆ ಆಗುವ ಸಾಧ್ಯತೆ ಇರುತ್ತದೆ ಎಂದು ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು.