ಬೆಂಗಳೂರು: ಮುಡಾ ಹಗರಣ ವಿಚಾರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ. ದೆಹಲಿಯಿಂದ ವಾಪಸ್ ಆಗಿರುವ ರಾಜ್ಯಪಾಲರು ಇನ್ಮುಂದೆ ಅಸಲಿ ಆಟ ಆರಂಭಿಸುತ್ತಾರಾ ಎಂಬ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಶೋಕಾಸ್ ನೋಟಿಸ್‌ನ ಮುಂದಿನ ಪ್ರಕ್ರಿಯೆ ಹೇಗಿರಲಿದೆ ಎಂಬ ಉತ್ಸಾಹ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿಸಿದರೆ ಸರ್ಕಾರ ಹಾಗೂ ರಾಜಭವನದ ನಡುವೆ ರಾಜಕೀಯ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಸದ್ಯಕ್ಕೆ ಸದ್ಯಕ್ಕೆ ರಾಜ್ಯಪಾಲರು ಕಾದು ನೋಡಲಿದ್ದಾರೆ ಎನ್ನಲಾಗುತ್ತಿದೆ.
ದೆಹಲಿಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದ್ದು ಆಗಸ್ಟ್ 12 ರಂದು ಮುಕ್ತಾಯಗೊಳ್ಳಲಿದೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದರೆ, ಸದನದಲ್ಲಿ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸಬಹುದು ಎಂಬ ಕಾರಣಕ್ಕೆ ಅಲ್ಲಿಯವರೆಗೂ ಯಾವುದೇ ತೀರ್ಮಾನ ಕೈಗೊಳ್ಳುವುದು ಅನುಮಾನ ಎನ್ನಲಾಗಿದೆ. ಈ ಕಾರಣಕ್ಕೆ ಆಗಸ್ಟ್ 12ರ ಬಳಿಕ ರಾಜ್ಯಪಾಲರು ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.