ತುಮಕೂರು: ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಮತ್ತೆ ಕಾಂಗ್ರೆಸ್ ಆಗಮನಕ್ಕೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರಿ ಬಸ್ ಅಥವಾ ರೈಲಿನ ಥರ ಅಲ್ಲ. ಯಾರು ಬೇಕಾದ್ರು, ಯಾವಾಗ ಬೇಕಾದ್ರೂ ಹತ್ತಿ ಹೋಗೋದಕ್ಕೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪರಮೇಶ್ವರ್ ಆಪ್ತ ಮುರಳಿಧರ ಹಾಲಪ್ಪ ಕಿಡಿಕಾರಿದ್ದಾರೆ.
ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಮತ್ತೆ ಕಾಂಗ್ರೆಸ್ ಕದ ತಟ್ಟಿದ ವಿಚಾರಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಆಪ್ತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳಿಧರ ಹಾಲಪ್ಪ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಈ ಕುರಿತು ಮಾತನಾಡಿದ ಮುರಳಿಧರ ಹಾಲಪ್ಪ ಅವರು, ಯಾರು ಹಿಂದೆ ಪಕ್ಷದ ನಾಯಕರನ್ನ ವಿಶ್ವಾಸಘಾತುಕ, ನಂಬಿಕೆದ್ರೋಹಿಗಳು ಅಂದಿದ್ರೋ. ಅದೆಲ್ಲ ಈಗ ಲೆಕ್ಕಾಚಾರ ಆಗುತ್ತೆ. ಈಗಾಗಲೇ ಸರ್ವೇ ರಿಪೋರ್ಟ್‌ಗಳು ಎಐಸಿಸಿಯನ್ನ ತಲುಪಿದೆ.ಎಲ್ಲರ ಅಭಿಪ್ರಾಯವೂ ಅದರಲ್ಲಿ ಇದೆ. ಮೊದಲಿನಿಂದಲೂ ಪಕ್ಷದ ಜೊತೆ ಗಟ್ಟಿಯಾಗಿ ನಿಂತವರನ್ನ ಮಾತ್ರ ಕಾರ್ಯಕರ್ತರು ಒಪ್ಪಿಕೊಳ್ತಾರೆ ಎಂದಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸೋಲಿಗೆ ಮುದ್ದಹನುಮೇಗೌಡರು ಕಾರಣ. ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಅದೆಲ್ಲವನ್ನ ಕೂಡ ಪಕ್ಷದ ವರಿಷ್ಠರು ಲೆಕ್ಕ ಹಾಕುತ್ತಾರೆ ಎಂದು ಮುದ್ದಹನುಮೇಗೌಡರ ವಿರುದ್ಧ ಮುರಳಿಧರ ಹಾಲಪ್ಪ ವಾಗ್ಧಾಳಿ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಮನೆಗೂ, ರಾಜಣ್ಣ ಅವರ ಮನೆಗೂ ಮುದ್ದಹನುಮೇಗೌಡರು ಭೇಟಿ ಕೊಟ್ಟಿದ್ದಾರೆ. ಆದ್ರೆ ಭೇಟಿಯ ಕಾರಣವನ್ನ ಅವರು ಬಹಿರಂಗಪಡಿಸಿಲ್ಲ. ಅಷ್ಟು ಸುಲಭವಾಗಿ ಕಾರ್ಯಕರ್ತರು ಮುದ್ದಹನುಮೇಗೌಡರು ವಾಪಾಸ್ ಬರೋದನ್ನ ಒಪ್ಪೋದಿಲ್ಲ. ತಿಪಟೂರು ಶಾಸಕ ಷಡಕ್ಷರಿಯನ್ನ ಸೋಲಿಸಲು ಮುದ್ದಹನುಮೇಗೌಡರು ಅವಿರತ ದುಡಿದಿದ್ದರು. ಅವೆಲ್ಲವನ್ನ ಪಕ್ಷ ಮರೆಯಲು ಸಾಧ್ಯವಿಲ್ಲ. ನನಗೆ ಜಿ. ಪರಮೇಶ್ವರ್, ಕೆ. ಎನ್. ರಾಜಣ್ಣ, ಡಿಕೆಶಿ, ಸಿದ್ದರಾಮಯ್ಯ ಎಲ್ಲರ ಅಭಯವಿದೆ ಎಂದು ಹೇಳಿದರು.