Friday, April 11, 2025
Google search engine

Homeಸ್ಥಳೀಯಜನವರಿ 31ರಿಂದ ಫೆಬ್ರವರಿ 16ರವರೆಗೆ ಮುಡುಕುತೊರೆ ಜಾತ್ರಾ ಮಹೋತ್ಸವ: ಅಗತ್ಯ ಸಿದ್ಧತೆಗೆ ಡಿಸಿ ಲಕ್ಷ್ಮೀಕಾಂತ ರೆಡ್ಡಿ...

ಜನವರಿ 31ರಿಂದ ಫೆಬ್ರವರಿ 16ರವರೆಗೆ ಮುಡುಕುತೊರೆ ಜಾತ್ರಾ ಮಹೋತ್ಸವ: ಅಗತ್ಯ ಸಿದ್ಧತೆಗೆ ಡಿಸಿ ಲಕ್ಷ್ಮೀಕಾಂತ ರೆಡ್ಡಿ ಸೂಚನೆ

ಮೈಸೂರು: ಐತಿಹಾಸಿಕ ಮುಡುಕುತೊರೆ ಜಾತ್ರಾ ಮಹೋತ್ಸವ ಜನವರಿ 31ರಿಂದ ಫೆಬ್ರವರಿ 16ರವರೆಗೆ ನಡೆಯಲಿದ್ದು ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಡುಕುತೊರೆ ಜಾತ್ರಾ ಮಹೋತ್ಸವ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಸಭೆ ನಡೆಸಿ ಮಾತನಾಡಿದರು.

ಜನವರಿ 31 ರಿಂದ ಫೆಬ್ರವರಿ 16ರವರೆಗೆ ಮುಡುಕುತೊರೆ ಜಾತ್ರಾ ಮಹೋತ್ಸವ ನಡೆಯಲಿದೆ, ಫೆಬ್ರವರಿ 7 ರಂದು ರಥೋತ್ಸವ, ಫೆಬ್ರವರಿ 10ಕ್ಕೆ ತೆಪ್ಪೋತ್ಸವ ಸಮಾರಂಭ, 17 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ‌. ಈ ಸಂಬಂಧ ಅಧಿಕಾರಿಗಳು ಯಾವುದೇ ತೊಂದರೆ ಆಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ಹಾಗೂ ವೈದ್ಯರು ತಂಡ ಜಾತ್ರಾ ಮಹೋತ್ಸವದಲ್ಲಿ ಇರಬೇಕು. ಚೆಸ್ಕಾಂ ಇಲಾಖೆಯಿಂದ ವಿದ್ಯುತ್ ದೀಪಾಲಂಕಾರ ಮಾಡಬೇಕು. ತಾತ್ಕಾಲಿಕ ಶೌಚಾಲಯ, ಮೊಬೈಲ್ ಶೌಚಾಲಯ ಹಾಗೂ ಬಟ್ಟೆ ಬದಲಿಸುವ ಕೊಠಡಿ ನಿರ್ಮಿಸಿ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್, ಧ್ವನಿ ವರ್ಧಕ , ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಜಾತ್ರಾ ಮಾಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಾತ್ರಾ ಪ್ರದೇಶದಲ್ಲಿ ಸ್ವಚ್ಚತೆ ಹಾಗೂ ನೈರ್ಮಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಜಿ. ಲಕ್ಷ್ಮೀ ಕಾಂತರೆಡ್ಡಿ ತಿಳಿಸಿದರು.

ಸಭೆಯಲ್ಲಿ ಪಶುಪಾಲನಾ ಇಲಾಖೆಯ ಸಹಾಯ ನಿರ್ದೇಶಕರಾದ ಡಾ ಲಿಂಗರಾಜು ಅವರು ಮಾತನಾಡಿ, ಉತ್ತಮ ರಾಸುಗಳಿಗೆ ಆಯ್ಕೆ ಸಂಬಂಧ ಜನವರಿ 31 ರಿಂದ ಫೆಬ್ರವರಿ 3 ವರೆಗೆ ರಾಸುಗಳ ರೈತರು ಸ್ಥಳದಲ್ಲಿದ್ದು ಆಯ್ಕೆ ಸಂಬಂಧ ನೊಂದಣಿ ಮಾಡಿಕೊಳ್ಳಬೇಕು. ಫೆಬ್ರವರಿ 5 ರಂದು ಉತ್ತಮ ರಾಸುಗಳ ಆಯ್ಕೆ ನಡೆಯುತ್ತದೆ. ಆದರೆ ಕೊನೆಯ ಎರಡು ದಿನ ಅಥವಾ ಆಯ್ಕೆಯ ದಿನ ನೇರವಾಗಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಟಿ ನರಸೀಪುರ ತಹಶೀಲ್ದಾರ್ ಸುರೇಶ್ ಆಚಾರ್, ಮುಜರಾಯಿ ಇಲಾಖೆಯ ತಹಶೀಲ್ದಾರ್ ಲತಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular