ಕೊಪ್ಪಳ : ಐದು ವರ್ಷ ಬಾಲಕ ಮನೆಯ ಮೊದಲನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವಂತಹ ಘಟನೆ ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ. ಪವಾಡಸದೃಶವೆಂಬಂತೆ ಬಾಲಕ ಪಾರಾಗಿದ್ದಾನೆ. ಮಹಮ್ಮದ್ ಹ್ಯಾರಿಸ್ ಸಾವು ಗೆದ್ದುಬಂದ ಬಾಲಕ. ಕೂಡಲೇ ಕೊಪ್ಪಳ ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಆದರೆ ವೈದ್ಯರ ಪರೀಕ್ಷೆ ವೇಳೆ ಮಹಮ್ಮದ್ ಹ್ಯಾರಿಸ್ ತಲೆಯಲ್ಲಿ ಬಿರುಕು ಕಂಡುಬಂದಿದೆ. ಬಾಲಕ ಮೊದಲನೇ ಮಹಡಿಯಿಂದ ಕೆಳೆಗ ಬಿಳ್ಳುವ ದೃಶ್ಯ ಸೆರೆಯಾಗಿದ್ದು, ಎದೆ ಝಲ್ ಅನ್ನಿಸುತ್ತದೆ.
ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ಐದು ವರ್ಷದ ಬಾಲಕ ಮಹಮ್ಮದ್ ಹ್ಯಾರಿಸ್ ನಿನ್ನೆ ಮಧ್ಯಾಹ್ನ ಮೊದಲನೇ ಮಹಡಿಯಲ್ಲಿ ಪೇಪರ್ನಿಂದ ಪಾರಿವಾಳ ಮಾಡಿ ಆಟವಾಡುತ್ತಿದ್ದ. ಅದನ್ನು ಗಾಳಿ ತೂರಿ ಹಿಡಿಯಲು ಹೋದಾಗ ಮೊದಲನೇ ಮಹಡಿಯಿಂದ ಕೆಳಗಡೆ ಬಿದ್ದಿದ್ದಾನೆ. ಮಹಮ್ಮದ್ ಕೆಳಗಡೆ ಬಿಳ್ಳುವ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.
ಮನೆಯ ಕೆಳಗಡೆ ಮಹಮ್ಮದ್ ಹ್ಯಾರಿಸ್ ಸಹೋದರಿ ಕೂಡ ಆಟವಾಡುತ್ತಿದ್ದು, ಮಹಮ್ಮದ್ ಬಿದ್ದ ತಕ್ಷಣ ಮೇಲೆ ಎತ್ತಿದ್ದಾಳೆ. ಒಳಗಡೆಯಿಂದ ಪೋಷಕರು ಕಿರುಚುತ್ತಾ ಓಡೋಡಿ ಬಂದಿದ್ದಾರೆ. ಕೆಳಗಡೆ ಬಿದ್ದ ಮಗುವನ್ನ ಕೂಡಲೇ ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಹಮ್ಮದ್ಗೆ 2 ಗಂಟೆಯೊಳಗೆ ಆಪರೇಷನ್ ಮಾಡಿದ್ದಾರೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಒಟ್ಟಾರೆ ಮೊದಲನೇ ಮಹಡಿಯಿಂದ ಬಾಲಕ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ್ದಾನೆ. ಆತನ ಹಣೆ ಬರಹ ಗಟ್ಟಿಯಿರುವ ಕಾರಣ ಬದುಕಿಳಿದಿದ್ದಾನೆ. ಸದ್ಯ ಮಹಮ್ಮದ್ಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.



