ಗುಂಡ್ಲುಪೇಟೆ: ಪಟ್ಟಣದ ಪುರಸಭೆ ಆವರಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಪುರಸಭೆ ಮುಖ್ಯಾಧಿಕಾರಿ ವಸಂತ ಕುಮಾರಿ ಗುರುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವಸಂತ ಕುಮಾರಿ ಮಾತನಾಡಿ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಪಟ್ಟಣ ವ್ಯಾಪ್ತಿಯಲ್ಲಿ ಮೂರು ಕೇಂದ್ರಗಳನ್ನು ತೆರೆಯಲಾಗಿದ್ದು, ಸಿಡಿಎಸ್ ಭವನ, ಹಳೇ ಬಸ್ ನಿಲ್ದಾಣದ ಕಲಾ ಮಂದಿರ ಹಾಗೂ ಪುರಸಭೆ ಕಚೇರಿಯಲ್ಲಿ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಬಿಪಿಎಲ್, ಎಪಿಲ್ ಕಾರ್ಡ್ ದಾರರರು ಅರ್ಜಿ ಸಲ್ಲಿಸಬಹುದಾಗಿದ್ದು, ಇದರಡಿ ತೆರಿಗೆ ಪಾವತಿದಾರರು ಅರ್ಜಿ ಹಾಕಲು ಅರ್ಹರಾಗಿರುವುದಿಲ್ಲ. ಗೃಹ ಲಕ್ಷ್ಮಿ ಯೋಜನೆ ಸೇವೆ ಕೊಡಲು ಪುರಸಭೆ ವತಿಯಿಂದ ತರಬೇತಿ ಹೊಂದಿರುವ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿ ನೇಮಿಸಲಾಗಿದ್ದು, ಕೇಂದ್ರಗಳಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗಿದೆ. ಆದ್ದರಿಂದ ಸಕಾಲದಲ್ಲಿ ಮಹಿಳೆಯರು ಇದರ ಉಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಸಲಹೆ ನೀಡಿದರು.
ಪುರಸಭೆ ಸದಸ್ಯ ಎನ್.ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿರುವುದು ದೇಶಕ್ಕೆ ಮಾದರಿಯಾಗಿದೆ. ಗೃಹ ಲಕ್ಷ್ಮಿ ಅಡಿಯಲ್ಲಿ ಪ್ರತಿ ಕುಟುಂಬದ ಮಹಿಳೆಯರಿಗೆ 2 ಸಾವಿರ ನೀಡುತ್ತಿರುವುದು ಸ್ವಾಗತಾರ್ಹ. ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳ ಅಡಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಐದು 5 ಸಾವಿರದಷ್ಟು ಹಣ ಸಿಗಲಿದೆ. ಆದ್ದರಿಂದ ಈ ಎಲ್ಲಾ ಯೋಜನೆಗಳನ್ನು ಫಲಾನುಭವಿಗಳು ಪಡೆಯುವ ಮೂಲಕ ನೆಮ್ಮದಿಯ ಜೀವನ ನಡೆಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಜಗೋಪಾಲ್, ವ್ಯವಸ್ಥಾಪಕ ಜಗದೀಶ್, ಆರೋಗ್ಯ ಅಧಿಕಾರಿ ಗೋಪಿ, ಪರಮೇಶ್ವರಪ್ಪ, ಕಂದಾಯ ಅಧಿಕಾರಿ ಸವಿತಾ, ಇಂಜಿನಿಯರ್ ಅನುಪಮಾ, ಪರಿಸರ ಅಭಿಯಂತ ಮಹೇಶ್, ಎಸ್ ಡಿಎ ತುಷಾರ್, ಕಂಪ್ಯೂಟರ್ ಆಪರೇಟರ್ ರಾಚಪ್ಪಾಜಿ, ತ್ರಿವೇಣಿ ಸೇರಿದಂತೆ ಪುರಸಭೆ ಸಿಬ್ಬಂದಿ ವರ್ಗದವರು ಹಾಜರಿದ್ದರು.