ಪ್ರಗತಿ ಪರಿಶೀಲನೆ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸೂಚನೆ
ಗುಂಡ್ಲುಪೇಟೆ: ಕಳೆದ ಅವಧಿಯಲ್ಲಿ ಪಟ್ಟಣದ ಪುರಸಭೆ ವತಿಯಿಂದ ಹಂಚಿಕೆಯಾಗಿರುವ ನಿವೇಶನಗಳ ಪಟ್ಟಿಯನ್ನು ರದ್ದು ಪಡಿಸಿ ನೈಜ ಫಲಾನುಭವಿಗಳ ಹೊಸ ಪಟ್ಟಿ ತಯಾರಿಸುವಂತೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಪಟ್ಟಣ ಪುರಸಭೆ ಕಚೇರಿಯಲ್ಲಿ ನಡೆದ ಬೀದಿ ಬದಿ ವ್ಯಾಪಾರಿಗಳ ಕುಂದು ಕೊರತೆ ಆಲಿಕೆ ಹಾಗು ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಪುರಸಭೆ ಬಿಜೆಪಿ ಆಡಳಿತದ ಅವಧಿಯಲ್ಲಿ 670 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಇದರಲ್ಲಿ ನೈಜ ಫಲಾನುಭವಿಗಳಿಗೆ ನಿವೇಶನ ನೀಡದೆ ತಮಗಿಷ್ಟ ಬಂದವರಿಗೆ ಕೊಟ್ಟಿದ್ದಾರೆ ಎಂದು ವ್ಯಾಪಕವಾಗಿ ದೂರು ಕೇಳಿ ಬಂದ ಹಿನ್ನೆಲೆ ಹಳೇ ಪಟ್ಟಿ ರದ್ದುಪಡಿಸುವಂತೆ ಸೂಚಿಸಿದರು.
ವಿವಿಧ ವಾರ್ಡ್‍ಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂದು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ದೂರುತ್ತಿದ್ದಾರೆ. ಆದ್ದರಿಂದ ಕಸ ವಿಲೇವಾರಿ ತ್ವರಿತವಾಗಿ ಆಗುವ ರೀತಿಯಲ್ಲಿ ಕ್ರಮ ವಹಿಸಬೇಕು ಎಂದು ಪುರಸಬೆ ಸದಸ್ಯ ಎನ್.ಕುಮಾರ್ ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಪೌರ ಕಾರ್ಮಿಕರ ಕೊರತೆಯಿರುವ ಕಾರಣ ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಅನುಮಮತಿ ಪಡೆದ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿ ಒಂದು ಜಾಗದಲ್ಲಿ ಕಸ ಹಾಕಬೇಕು. ಎಲ್ಲೆಂದರಲ್ಲಿ ಎಸೆಯಬಾರದು. ಅನುಮತಿ ಇಲ್ಲದೆ ವ್ಯಾಪಾರ ಮಾಡುವವರಿಗೆ ಪಕ್ಕದಲ್ಲಿರುವವರು ಅರಿವು ಮೂಡಿಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮುಖ್ಯಾಧಿಕಾರಿ ವಸಂತಕುಮಾರಿ ಸೂಚಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಹಳೇ ಬಸ್ ನಿಲ್ದಾಣ, ಹೆದ್ದಾರಿ ರಸ್ತೆ, ಕರ್ನಾಟಕ ಬ್ಯಾಂಕ್ ಮುಂಭಾಗ, ಡಿ.ದೇವರಾಜ ಅರಸು ಕ್ರೀಡಾಂಗಣದ ಮುಂಭಾಗ ಸೇರಿದಂತೆ ಪ್ರಮುಖ ಅಂಗಡಿ ಮುಂಗಟ್ಟುಗಳ ಮುಂದೆ ವಾಹನ ಚಾಲಕರು ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿದ್ದಾರೆ. ಇದಕ್ಕೆ ಈ ಕೂಡಲೇ ಕಡಿವಾಣ ಹಾಕಿ ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಬೇಕು. ಜೊತೆಗೆ ಟ್ರಾಫಿಕ್ ಸಮಸ್ಯೆಗೆ ಪೆÇಲೀಸರು ಗಂಟೆಗೊಮ್ಮೆ ರೌಂಡ್ ನಡೆಸಬೇಕು. ಈ ಮೂಲಕ ಮುಖ್ಯ ರಸ್ತೆಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಶಾಸಕ ಗಣೇಶಪ್ರಸಾದ್ ಪೊಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜುಗೆ ಸೂಚನೆ ನೀಡಿದರು.

ಬಿಡಾಡಿ ದನಗಳು ಹೆದ್ದಾರಿ ರಸ್ತೆ ಮಧ್ಯೆ ಹಾಗೂ ಜನಸಂದಣಿ ಸ್ಥಳದಲ್ಲೆ ಅಡ್ಡಾಡುತ್ತಿವೆ. ಇದರ ಬಗ್ಗೆ ಕೂಡಲೇ ಕ್ರಮ ವಹಿಸಬೇಕು. ಜೊತೆಗೆ ಬೀದಿ ನಾಯಿ ಹಾಗೂ ಹಂದಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಹೆದ್ದಾರಿ ರಸ್ತೆಯ ವೃತ್ತಗಳಲ್ಲಿ ಹಾಕಲಾಗಿರುವ ಅನಧಿಕೃತವಾಗಿ ಬೋರ್ಡ್ ಹಾಕಿರುವುದನ್ನು ತೆರವು ಗೊಳಿಸಬೇಕು. ಕೆಇಬಿ ಹತ್ತಿರ ನಿರ್ಮಾಣ ಮಾಡಿರುವ ಫುಡ್ ಝೋನ್ ನಿರುಪಯುಕ್ತವಾಗಿದ್ದು, ಅದನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಪುರಸಭೆ ಸದಸ್ಯರು ಒತ್ತಾಯಿಸಿದರು.
ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಕೆಟ್ಟು ನಿಂತಿರುವ ಬೀದಿ ದೀಪ ದುರಸ್ತಿ, ರಸ್ತೆ ಬದಿಯಲ್ಲಿ ಕುಸಿದ ಚರಂಡಿಗಳ ಸ್ಲಾಬ್ ನಿರ್ಮಾಣ ಹಾಗು ಹೆದ್ದಾರಿಯಲ್ಲಿ ಬೆಳೆದು ನಿಂತಿರುವ ಮುಳ್ಳಿನ ಪೊದೆಗಳನ್ನು ಶಿಘ್ರದಲ್ಲಿ ತೆರವು ಗೊಳಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‍ಗೆ ಶಾಸಕರು ಸೂಚಿಸಿದರು.
ಇ-ಸ್ವತ್ತು, ಖಾತೆ ಬದಲಾವಣೆ ಮಾಡಲು ಪುರಸಭೆ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಜೊತೆಗೆ ಬ್ರೋಕರ್ ಗಳ ಹಾವಳಿಯೂ ಕೂಡ ಹೆಚ್ಚಿದ್ದು, ಖಾತೆ ವರ್ಷವಾದರು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇದರ ಬಗ್ಗೆ ಕ್ರಮ ವಹಿಸಿ ಕಾಲಮಿತಿಯೊಳಗೆ ಇ-ಸ್ವತ್ತು, ಖಾತೆ ಬದಲಾವಣೆ ಮಾಡಲು ಅಧಿಕಾರಿಗಳು ಕಾರ್ಯ ಪ್ರೌವೃತ್ತರಾಬೇಕೆಂದು ಪುರಸಭೆ ಸದಸ್ಯ ಅಣ್ಣಯ್ಯಸ್ವಾಮಿ ಆಗ್ರಹಿಸಿದರು.
160 ಕೋಟಿ ರೂ. ವೆಚ್ಚದ ಕಬಿನಿ ಮೂಲಕ ಕುಡಿಯುವ ನೀರಿನ ಎಕ್ಸ್ ಪ್ರೆಸ್ ಯೋಜನೆ ಕಾಮಗಾರಿ ಮುಗಿದಿದ್ದು, ಶೀಘ್ರದಲ್ಲೆ ಪಟ್ಟಣಕ್ಕೆ ನೀರೊದಗಿಸುವ ವ್ಯವಸ್ಥೆ ಮಾಡಲಾಗುವುದು. ಪಟ್ಟಣ ವ್ಯಾಪ್ತಿಯ ಹಲವು ಕಡೆ ಕಾಲುವೆ ಸೇರಿದಂತೆ ಸರ್ಖಾರಿ ಜಾಗಗಳು ಒತ್ತುವರಿಯಾಗಿದ್ದು, ಇವುಗಳ ತೆರವಿಗೆ ಮುಂದಾಗಬೇಕು ಎಂದು ಶಾಸಕರು ಸೂಚಿಸಿದರು.
ಪುರಸಭೆ ವತಿಯಿಂದ ನಿರ್ಮಾಣ ಮಾಡಿರುವ ಮಳಿಗೆಗಳ ಬಾಡಿಗೆ ಹಲವು ವರ್ಷಗಳಿಂದಲು ಬಾಕಿ ಬಿದ್ದಿದೆ. ಟೆಂಡರ್ ಮೂಲಕ ಮಳಿಗೆ ತೆಗೆದುಕೊಂಡಿರುವ ಅನೇಕ ಮಂದಿ ಸಬ್ ಲೀಸ್ ಕೊಟ್ಟು 30-40 ಸಾವಿರ ಬಾಡಿಗೆ ಪಡೆಯುತ್ತಿದ್ದಾರೆ. ಒಬ್ಬೊಬ್ಬ ಬಾಡಿಗೆದಾರನು 15 ಲಕ್ಷದಷ್ಟು ಬಾಡಿಗೆ ಹಣವನ್ನು ಉಳಿಸಿಕೊಂಡಿದ್ದು, ಪುರಸಭೆರ ನಷ್ಟವಾಗುತ್ತಿದೆ ಎಂದು ಪುರಸಭೆ ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸರಿಯಾದ ರೀತಿಯಲ್ಲಿ ಬಾಡಿಗೆ ಕಟ್ಟಿಸಿಕೊಳ್ಳಿ ಎಂದು ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಪೆÇಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜು, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಮಹಮ್ಮದ್ ಇಲಿಯಾಸ್, ಎನ್.ಕುಮಾರ್, ಮಧುಸೂಧನ್, ಶ್ರೀನಿವಾಸ್ ಕಣ್ಣಪ್ಪ, ಶಶಿಧರ್ ಪಿ.ದೀಪು, ರಾಜಗೋಪಾಲ್, ಹೀನಾ ಕೌಸರ್, ಪುರಸಭೆ ಪರಿಸರ ಅಧಿಕಾರಿ ಮಹೇಶ್, ಆರೋಗ್ಯಾಧಿಕಾರಿ ಗೋಪಿ, ಇಂಜಿನಿಯರ್ ಮಂಜುನಾಥ್, ಮಚೆಸ್ಕಾಂ ಎಇಇ ಸಿದ್ದಲಿಂಗಪ್ಪ ಸೇರಿದಂತೆ ಇತರರು ಹಾಜರಿದ್ದರು.