ಮಂಗಳೂರು (ದಕ್ಷಿಣ ಕನ್ನಡ): ಯುವಕನನ್ನು ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿದ ಘಟನೆ ಮಂಗಳೂರಿನ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯ ಶಾಲೆಯೊಂದರ ಬಳಿ ನಡೆದಿದೆ.
ಹತ್ಯೆಗೀಡಾದ ಯುವಕನನ್ನು ವರುಣ್ ಗಟ್ಟಿ ಎಂದು ಗುರುತಿಸಲಾಗಿದೆ. ಶಾಲೆಯ ಮುಂಭಾಗದ ಕಟ್ಟೆಯೊಂದರಲ್ಲಿ ಕುಳಿತು ಸೂರಜ್ ಮತ್ತು ರವಿರಾಜ್ ಎಂಬುವವರು ಬಿಯರ್ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದರೆನ್ನಲಾಗಿದೆ. ಈ ವೇಳೆ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನಿಸಿದ್ದು, ವಾಗ್ವಾದ ತಾರಕಕ್ಕೇರಿ ಈ ವೇಳೆ ಆರೋಪಿಗಳು ವರುಣ್ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದಾರೆ.
ಗಂಭೀರ ಗಾಯಗೊಂಡ ವರುಣ್ ನನ್ನು ಸಹೋದರ ಶರಣ್ ಮತ್ತು ಸ್ನೇಹಿತರು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿಗಳಾದ ಸೂರಜ್ ಮತ್ತು ರವಿರಾಜ್ ಎಂಬವರನ್ನು ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
