Friday, April 4, 2025
Google search engine

Homeಕ್ಯಾಂಪಸ್ ಕಲರವಸಂಗೀತ-ಸಂಸ್ಕೃತಿ: ನಗರದ ಪೂರ್ಣ ಚೇತನ ಶಾಲೆಯ ಐವರು ವಿದ್ಯಾರ್ಥಿಗಳಿಂದ ವೈಯಕ್ತಿಕ ವಿಶ್ವದಾಖಲೆ!

ಸಂಗೀತ-ಸಂಸ್ಕೃತಿ: ನಗರದ ಪೂರ್ಣ ಚೇತನ ಶಾಲೆಯ ಐವರು ವಿದ್ಯಾರ್ಥಿಗಳಿಂದ ವೈಯಕ್ತಿಕ ವಿಶ್ವದಾಖಲೆ!

ಮೈಸೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ಏಕ ಕಾಲದಲ್ಲಿ ನಗರದ ಪೂರ್ಣಚೇತನ ಶಾಲೆಯ ಐವರು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಐದು ನೂತನ ವಿಶ್ವ ದಾಖಲೆಗಳನ್ನು ನಿರ್ಮಿಸಿ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಐವರು ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಸಂಗೀತ-ಸಾಂಸ್ಕೃತಿಕ ಕ್ಷೇತ್ರಗಲ್ಲಿ ತಮ್ಮ ಪ್ರದರ್ಶನದ ಮೂಲಕ ಈ ಹೊಸ ದಾಖಲೆ ಸೃಷ್ಟಿಸಿ, ಮೈಸೂರಿನ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಪೂರ್ಣ ಚೇತನ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿ ಮುಳುಕುಟ್ಲ ಮೋಕ್ಷದ ಸತತ ಏಳು ಗಂಟೆ ನಾಲ್ಕು ನಿಮಿಷಗಳಲ್ಲಿ ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳನ್ನು ಪಠಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ, ಇದು ವೈಯಕ್ತಿಕ ಮ್ಯಾರಥಾನ್ ವಿಭಾಗದಡಿಯಲ್ಲಿ ವಿಶ್ವದಾಖಲೆಯಾಗಿದೆ.

ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಮಹೇಶ್ ಕುಮಾರ್ ಎಚ್‌.ಎಸ್, ಸ್ವಾಮಿ ವಿವೇಕಾನಂದರ ಕುರಿತು ಸುದೀರ್ಘ ಉಪನ್ಯಾಸ ಸರಣಿಯ ವಿಭಾಗದಲ್ಲಿ 14 ಗಂಟೆ 2 ನಿಮಿಷಗಳ ಕಾಲ ಮಾತನಾಡಿ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಪೃಥು ಪಿ ಅದ್ವೈತ್, 30 ನಿಮಿಷಗಳಲ್ಲಿ ಹೆಚ್ಚು ಶ್ಲೋಕಗಳನ್ನು ಪಠಿಸುವ ವಿಭಾಗದಡಿಯಲ್ಲಿ ಹೊಸ ವಿಶ್ವ ದಾಖಲೆ ಸೃಷ್ಟಿಸಿದರು. ಈ ವಿದ್ಯಾರ್ಥಿಯು 30 ನಿಮಿಷಗಳಲ್ಲಿ 150 ಶ್ಲೋಕಗಳನ್ನು ಪಠಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು.

ಸತತ 14 ಗಂಟೆ 2 ನಿಮಿಷಗಳ ಕಾಲ ಕೀ ಬೋರ್ಡ್ ನುಡಿಸುವ ಮೂಲಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ತೋಶನ್ ಜಿ ರಾವ್ ವೈಯಕ್ತಿಕ ವಿಭಾಗದಲ್ಲಿ ವಿಶ್ವದಾಖಲೆಯನ್ನು ಸೃಷ್ಟಿಸಿದ್ದಾರೆ.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಐದು ನಿಮಿಷಗಳಲ್ಲಿ 349 ವೈವಿಧ್ಯಮಯ ಡಿಜಿಟಲ್ ಚಿತ್ರಗಳನ್ನು ಗುರುತಿಸುವ ಮೂಲಕ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಅಸ್ಮಿ ಎ ಭಾರದ್ವಾಜ್ ವೈಯಕ್ತಿಕ ವಿಭಾಗದಲ್ಲಿ ಹೊಸ ವಿಶ್ವದಾಖಲೆ ಸೃಷ್ಟಿಸಿದರು.

ಈ ಎಲ್ಲಾ ವಿಶ್ವದಾಖಲೆಗಳನ್ನು ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿ ಮತ್ತು ಇಂಡಿಯಾ ರೆಕಾರ್ಡ್ಸ್ ಅಕಾಡೆಮಿ ಅಧಿಕೃತವಾಗಿ ಪ್ರಮಾಣೀಕರಿಸಿದೆ.

ವಿದ್ಯಾರ್ಥಿ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿ ದರ್ಶನ್ ರಾಜ್, ಈ ವಿದ್ಯಾರ್ಥಿಗಳು ತಮ್ಮ ವಿಶ್ವ ದಾಖಲೆಯ ಪ್ರದರ್ಶನದ ಮೂಲಕ ಸಮಾಜಕ್ಕೆ ದೇಶಭಕ್ತಿ, ಕಠಿಣ ಪರಿಶ್ರಮ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳ ಸಂದೇಶವನ್ನು ನೀಡಿದ್ದಾರೆ. “ಪ್ರತಿಯೊಬ್ಬ ವಿದ್ಯಾರ್ಥಿಯು ಹೊಸ ವಿಶ್ವ ದಾಖಲೆಯನ್ನು ರಚಿಸಲು ಒಂದು ವಿಶಿಷ್ಟವಾದ ಸವಾಲನ್ನು ಆಯ್ದುಕೊಂಡು, ಹೆಮ್ಮೆಯ ಸಾಧನೆ ಮಾಡಿದ್ದಾರೆ,” ಎಂದು ಅವರು ಹೇಳಿದರು.

“ವಿದ್ಯಾರ್ಥಿಗಳ ಈ ಸಾಧನೆಗಳು ನಮ್ಮ ಶಾಲೆಯ ಮೌಲ್ಯಗಳು ಮತ್ತು ಧ್ಯೇಯವನ್ನು ಪ್ರತಿಬಿಂಬಿಸುತ್ತವೆ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ವಿಶ್ವದಾಖಲೆಗಳನ್ನು ಸೃಷ್ಟಿಸಿ, ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ” ಎಂದು ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ಪ್ರತಿಯೊಂದು ವಿಶ್ವ ದಾಖಲೆಯ ಹಿಂದೆ ಸಮಾಜಕ್ಕೆ ಸಂದೇಶವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಪಿಯಾಂಕಾ ಬಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular